ನವ ದೆಹಲಿ: ದೇಶದ 6 ರಾಜ್ಯಗಳಲ್ಲಿ ಇತ್ತೀಚೆಗೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (Election Bypoll results 2022) ಆರ್‌ಜೆಡಿ ಮತ್ತು ಟಿಆರ್‌ಎಸ್ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.
ಬಿಹಾರದ ಮೋಕಮಾ ಮತ್ತು ಗೋಪಾಲ್ ಗಂಜ್, ಮಹಾರಾಷ್ಟ್ರದ ಅಂಧೇರಿ (ಪೂರ್ವ), ಹರಿಯಾಣದ ಅದಾಂಪುರ್, ತೆಲಂಗಾಣದ ಮುನುಗುಡೆ, ಉತ್ತರಪ್ರದೇಶದ ಗೋಲಾ ಗೋಕರ್ನ್‌ನಾಥ್, ಒಡಿಶಾದ ಧಮಾನ್ ನಗರ್‌ನಲ್ಲಿ ನವೆಂಬರ್ 3ರಂದು ಉಪ ಚುನಾವಣೆ ನಡೆದಿತ್ತು.
ಬಿಹಾರದಲ್ಲಿ ಇತ್ತೀಚಿನ ವರದಿಗಳ ಪ್ರಕಾರ ಗೋಪಾಲ್‌ಗಂಜ್‌ನಲ್ಲಿ ಬಿಜೆಪಿಯ ಕುಸುಮ್ ದೇವಿ ಅವರು 9ನೇ ಸುತ್ತಿನ ಮತ ಎಣಿಕೆಯಲ್ಲಿ ಆರ್‌ಜೆಡಿಯ ಮೋಹನ್ ಪ್ರಸಾದ್ ಗುಪ್ತಾ ಅವರಿಗಿಂತ 1,600 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ತೆಲಂಗಾಣದ ಮುನುಗುಡೆಯಲ್ಲಿ ಬಿಜೆಪಿ-ಟಿಆರ್‌ಎಸ್ ನಡುವೆ ನೇರ ಫೈಟ್ ನಡೆಯುತ್ತಿದ್ದು, ನಾಲ್ಕನೇ ಸುತ್ತಿನಲ್ಲಿ ಬಿಜೆಪಿಗಿಂತ ಟಿಆರ್‌ಎಸ್ ಅಭ್ಯರ್ಥಿ ಕೇವಲ ೭,೦೦ ಮತಗಳಿಂದ ಮುಂಚೂಣಿಯಲ್ಲಿದೆ.
ಉತ್ತರಪ್ರದೇಶದ ಗೋಲಾ ಗೋಕರ್ನ್‌ನಾಥ್‌ನಲ್ಲಿ 11ನೇ ಸುತ್ತಿನಲ್ಲಿ ಬಿಜೆಪಿಯ ಅಭ್ಯರ್ಥಿ 11,000 ಮತಗಳ ಅಂತರದಲ್ಲಿ ಮುನ್ನಡೆ ಗಳಿಸಿದ್ದಾರೆ.
ಒಡಿಶಾದ ಧಮಾನ್ ನಗರ್‌ನಲ್ಲಿ ಬಿಜೆಪಿ ಅಭ್ಯರ್ಥಿ, ಎರಡನೇ ಸುತ್ತಿನಲ್ಲಿ 1,379 ಮತಗಳ ಅಂತರದಲ್ಲಿ ಮುನ್ನಡೆ ಗಳಿಸಿದ್ದಾರೆ. ಹರಿಯಾಣದ ಅದಾಂಪುರ್‌ನಲ್ಲಿ ಬಿಜೆಪಿ, ಮೂರನೇ ಸುತ್ತಿನಲ್ಲಿ 6,000 ಮತಗಳಿಂದ ಮುನ್ನಡೆ ಗಳಿಸಿದೆ. ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ನಾಲ್ಕನೇ ಸುತ್ತಿನಲ್ಲಿ 1640 ಮತಗಳಿಂದ ಮುನ್ನಡೆಯಲ್ಲಿದೆ.