ಗಾಂಧಿನಗರ: ದೇಶದ ಗಮನ ಸೆಳೆದಿರುವ, ಪ್ರತಿಷ್ಠೆಯ ಕಣವಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಬೆನ್ನಲ್ಲೇ ಬಿಜೆಪಿಯು ಪ್ರಣಾಳಿಕೆ (BJP Manifesto For Gujarat) ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಮೂಲಭೂತವಾದ ನಿಗ್ರಹಕ್ಕೆ ಘಟಕ, ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ, 2036ರಲ್ಲಿ ಒಲಿಂಪಿಕ್ಸ್ ಆಯೋಜನೆ ಗುರಿ ಸೇರಿ ಹತ್ತಾರು ಭರವಸೆಗಳನ್ನು ನೀಡಿದೆ.
ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಟೀಲ್ ಅವರು ಬಿಜೆಪಿ ‘ಸಂಕಲ್ಪ ಪತ್ರ’ವನ್ನು ಬಿಡುಗಡೆಗೊಳಿಸಿದರು. ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ…
ಬಿಜೆಪಿ ಪ್ರಣಾಳಿಕೆಯ ಪ್ರಮುಖ 10 ಅಂಶಗಳು
- ಮೂಲಭೂತವಾದಿಗಳು, ಉಗ್ರವಾದಿಗಳ ನಿಗ್ರಹಕ್ಕಾಗಿ ಗುಜರಾತ್‌ನಲ್ಲಿ ಮೂಲಭೂತವಾದ ನಿಗ್ರಹ ಘಟಕ ಸ್ಥಾಪಿಸುವುದು.
- ರಾಜ್ಯದ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಲು ‘ಏಕರೂಪ ನಾಗರಿಕ ಸಂಹಿತೆ’ ಜಾರಿಗೆ ತರುವುದು.
- ಕೃಷಿ ಮಾರುಕಟ್ಟೆಯ ಉತ್ತೇಜನಕ್ಕೆ 10 ಸಾವಿರ ಕೋಟಿ ರೂಪಾಯಿಯನ್ನು ವಿನಿಯೋಗಿಸುವುದು.
- ಆರ್ಥಿಕವಾಗಿ ದುರ್ಬಲರಾಗಿರುವ (EWS) ವಿದ್ಯಾರ್ಥಿಗಳಿಗೆ ಹಣಕಾಸು ನೆರವು ಒದಗಿಸುವುದು
- ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುವುದು
- ಬಡವರ ಶಿಕ್ಷಣಕ್ಕೆ ಪ್ರತ್ಯೇಕ ನಿಧಿ, ರಾಜ್ಯದಲ್ಲಿ ಎರಡು ಸುಸಜ್ಜಿತ ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸುವುದು
- 2036ರ ಒಲಿಂಪಿಕ್ಸ್ ಆಯೋಜನೆಗಾಗಿ ‘ಗುಜರಾತ್ ಒಲಿಂಪಿಕ್ಸ್ ಮಿಷನ್’ ಜಾರಿಗೊಳಿಸುವುದು
- ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣುಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಕ್ರಮ ತೆಗೆದುಕೊಳ್ಳುವುದು
- ಗುಜರಾತ್ ಆರ್ಥಿಕತೆಯನ್ನು ಒಂದು ಲಕ್ಷ ಕೋಟಿ ಡಾಲರ್‌ಗೆ ಏರಿಕೆ ಮಾಡುವುದು, ವಿತ್ತೀಯ ಸುಧಾರಣೆ ತರುವುದು
- ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು
ಇದನ್ನೂ ಓದಿ | Gujarat Election 2022 | ಅಸ್ಮಿತೆ ಹಾದಿಯಲ್ಲಿ ಬಿಜೆಪಿ, ಮಾರ್ಗ ಬದಲಿಸಿದ ಕೈ, ರೋಡ್ ಬ್ರೇಕರ್ ಆಪ್!