Site icon Vistara News

Exit Poll 2022 | ಹಿಮಾಚಲ ಪ್ರದೇಶದಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು! ಕಾಂಗ್ರೆಸ್ ಜತೆ ಟೈಟ್ ಫೈಟ್

Himachal Pradesh @ Election

ನವದೆಹಲಿ: ಸೋಮವಾರ ಸಂಜೆ ಪ್ರಕಟವಾದ ಬಹುತೇಕ ಮತದಾನೋತ್ತರ ಸಮೀಕ್ಷೆಗಳು (Exit Poll 2022) ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿವೆ. ಆದರೆ, ಇದಕ್ಕೆ ಅದು ಭಾರೀ ಕಷ್ಟಪಡುವುದನ್ನು ಈ ಸಮೀಕ್ಷೆಗಳು ತಳ್ಳಿ ಹಾಕಿಲ್ಲ. ಅಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯ ತೀವ್ರ ಪೈಪೋಟಿ ಇದೆ. ಒಂದೆರಡು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನೂ ಪ್ರಿಡಿಕ್ಟ್ ಮಾಡಿವೆ.

ಹಿಮಾಚಲ ಪ್ರದೇಶ ವಿಧಾನಸಭೆಯು ಒಟ್ಟು 68 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತಕ್ಕೆ 35 ಸ್ಥಾನಗಳನ್ನು ಗೆಲ್ಲಬೇಕು. ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಡಿಸೆಂಬರ್ 8ರಂದು ಫಲಿತಾಂಶವು ಪ್ರಕಟವಾಗಲಿದೆ. ಸೋಮವಾರ ಪ್ರಕಟಗೊಂಡ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ನೆಮ್ಮದಿ ತಂದಿರುವ ಸಾಧ್ಯತೆಗಳಿವೆ. ಆದರೆ, ಕಾಂಗ್ರೆಸ್ ತನ್ನ ಸೋಲಿನ ಅಭಿಯಾನವನ್ನು ಮತ್ತೆ ಮುಂದುವರಿಸುತ್ತದೆಯೇ? ಕಾದು ನೋಡಬೇಕು. ಇನ್ನು ಆಪ್ ಅಂಥ ದೊಡ್ಡ ಪರಿಣಾಮವನ್ನು ಹಿಮಾಚಲ ಪ್ರದೇಶದಲ್ಲಿ ಮಾಡಿಲ್ಲ. ನವೆಂಬರ್ 12ರಂದು ನಡೆದ ಚುನಾವಣೆಯಲ್ಲಿ ಶೇ.74.54ರಷ್ಟು ಮತದಾನವಾಗಿತ್ತು.

ಎಕ್ಸಿಟ್ ಪೋಲ್‌ಗಳ ಭವಿಷ್ಯವೇನು?

| ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಬಿಜೆಪಿ 24ರಿಂದ 34, ಕಾಂಗ್ರೆಸ್ 30ರಿಂದ 40 ಸ್ಥಾನಗಳ್ನು ಗೆಲ್ಲಲಿದೆ. ಆಪ್ ಶೂನ್ಯ ಸಾಧನೆ ಮಾಡಲಿದೆ. ಇತರರು ನಾಲ್ಕರಿಂದ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಈ ಸಮೀಕ್ಷೆ ನಿಜವಾದರೆ, ಕಾಂಗ್ರೆಸ್‌ಗೆ ಅಧಿಕಾರ ಒಲಿಯಲಿದೆ.

| ಜನ್ ಕಿ ಬಾತ್-ಇಂಡಿಯಾ ನ್ಯೂಸ್ ಸಮೀಕ್ಷೆಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಬಹುದು. ಬಿಜೆಪಿ 34ರಿಂದ 40 ಹಾಗೂ ಕಾಂಗ್ರೆಸ್ 34ರಿಂದ 27 ಹಾಗೂ ಇತರರು 1ರಿಂದ 2 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಈ ಸಮೀಕ್ಷೆಯ ಪ್ರಕಾರ ಬಹುತೇಕ ಬಿಜೆಪಿ ಅಧಿಕಾರಕ್ಕೆ ಏರಲಿದೆ.

| ರಿಪಬ್ಲಿಕ್ ಮತ್ತು ಪಿಮಾರ್ಕ್ ಸಮೀಕ್ಷೆಯಲ್ಲೂ ಬಿಜೆಪಿ ನಿರಾಯಾಸವಾಗಿ ಗೆಲುವ ಸಾಧಿಸಲಿದೆ. ಕಾಂಗ್ರೆಸ್ ಪಕ್ಷವು 28ರಿಂದ 33 ಸ್ಥಾನಗಳನ್ನು ಗೆಲ್ಲಲು ಶಕ್ಯವಾದರೆ, ಬಿಜೆಪಿಯು 34ರಿಂದ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆಪ್ ಒಂದು ಮತ್ತು ಇತರರು ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳಬಹುದು.

| ಟೈಮ್ಸ್ ನೌ-ಇಟಿಜಿ ಸಮೀಕ್ಷೆ. ಈ ಎಕ್ಸಿಟ್ ಪೋಲ್ ಪ್ರಕಾರವೂ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ 24ರಿಂದ 32 ಕ್ಷೇತ್ರಗಳನ್ನು ಗೆದ್ದುಕೊಂಡರೆ, ಬಿಜೆಪಿ 34ರಿಂದ 42 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಬಹುದು. ಇನ್ನುಶೂನ್ಯ ಸಾಧನೆ ಮಾಡಿದರೆ, ಇತರರು 1ರಿಂದ 3 ಸ್ಥಾನಗಳನ್ನು ಗೆಲ್ಲಬಹುದು.

| ಇಂಡಿಯಾ ಟೀವಿ ಸಮೀಕ್ಷೆ. ಬಿಜೆಪಿಯ 35ರಿಂದ 40 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 26ರಿಂದ 31 ಕ್ಷೇತ್ರಗಳಲ್ಲಿ ಗೆಲುವು ಕಾಣಬಹುದು. ಇತರರು ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದ್ದಾರೆ.

| ಝೀ ನ್ಯೂಸ್ ಎಕ್ಸಿಟ್ ಪೋಲ್. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ. ಒಟ್ಟು 35 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 20ರಿಂದ 25 ಸ್ಥಾನಗಳಿಗ ತೃಪ್ತಿ ಪಡಲಿದೆ. ಆಪ್ ಎರಡು ಸ್ಥಾನ ಗೆಲ್ಲಬಹುದು. ಇತರರು ಒಂದರಿಂದ 5 ಕ್ಷೇತ್ರದಲ್ಲಿ ಜಯ ಸಾಧಿಸಬಹುದು.

| ಟಿವಿ9 ಭರತ್ ವರ್ಷ ಎಕ್ಸಿಟ್ ಪೋಲ್. ಈ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಊಹೆ ಮಾಡಲಾಗಿದೆ. ಬಿಜೆಪಿ 32ರಿಂದ 34 ಸ್ಥಾನ ಗೆದ್ದರೆ, ಕಾಂಗ್ರೆಸ್ 30ರಿಂದ 32 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಆಗ ಉಭಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬರಲಿದೆ. ಇನ್ನು ಆಪ್ ಶೂನ್ಯ ಸಾಧನೆ ಮಾಡಿದರೆ, ಇತರರು ಮೂರರಿಂದ 5 ಕ್ಷೇತ್ರ ಗೆಲ್ಲಬಹುದು.

ಇದನ್ನೂ ಓದಿ | Exit Poll 2022 | ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ನಾಗಾಲೋಟ, ಕಾಂಗ್ರೆಸ್‌, ಆಪ್‌ ಧೂಳೀಪಟ, ಪ್ರಮುಖ ಸಮೀಕ್ಷಾ ವರದಿ ಇಲ್ಲಿವೆ

Exit mobile version