Site icon Vistara News

BJP Executive | ಹೈದರಾಬಾದ್‌ನಲ್ಲಿ ಬೃಹತ್‌ ಫಲಕ, ಕಟೌಟ್‌ಗಳ ಮೂಲಕ ಬಿಜೆಪಿ-ಟಿಆರ್‌ಎಸ್‌ ಫೈಟ್

hydarbad bjp exicutive

ಹೈದರಾಬಾದ್:‌ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ಹೈದರಾಬಾದ್‌ ನಗರದಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್‌ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಶುರುವಾಗಿದೆ.

ಉಭಯ ಪಕ್ಷಗಳ ಧ್ವಜಗಳು, ಕಟೌಟ್‌, ಹೋರ್ಡಿಂಗ್ಸ್‌ ನಗರದೆಲ್ಲೆಡೆ ರಾರಾಜಿಸುತ್ತಿವೆ. ಎರಡೂ ಪಕ್ಷಗಳು ತಮ್ಮ ನಾಯಕರನ್ನು ಬೃಹತ್‌ ಕಟೌಟ್‌, ಫಲಕಗಳನ್ನು ಪ್ರದರ್ಶಿಸಿವೆ. ಜತೆಗೆ ಪರಸ್ಪರ ಟೀಕಿಸುವ ಹೋರ್ಡಿಂಗ್ಸ್‌ಗಳನ್ನೂ ಹಾಕಲಾಗಿದೆ. ಈ ಅಬ್ಬರದ ಕಟೌಟ್‌ ರಾಜಕೀಯದ ಪರಿಣಾಮ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ಟಿಆರ್‌ಎಸ್‌ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಟ್ವೀಟ್‌ ಸಮರವನ್ನೇ ನಡೆಸಿದ್ದಾರೆ. ನಗರದಲ್ಲಿ “ಬೈ ಬೈ ಮೋದಿʼ ಎಂಬ ಘೋಷಣೆ ಇರುವ ಫಲಕಗಳನ್ನು ಅಳವಡಿಸಲಾಗಿದೆ. ” ಮೋದಿ ಮತ್ತು ಕೆಸಿಆರ್‌ ಇಬ್ಬರ ಬಗ್ಗೆಯೂ ಎಚ್ಚರದಿಂದಿರಿʼ ಎಂಬ ಬ್ಯಾನರ್‌ಗಳೂ ಕಾಣಿಸಿಕೊಂಡಿವೆ.

ಬಿಜೆಪಿ ಕೆಲ ದಿನಗಳ ಹಿಂದೆ ” ಸಿಎಂ ವಿದಾಯ ಹೇಳುವ ಕಾಲ ಬಂತು, ಗುಡ್‌ ಬೈ ಸರ್‌ʼ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಅಣಕಿಸುವ ಬೃಹತ್‌ ಫಲಕವನ್ನು ಪ್ರದರ್ಶಿಸಿತ್ತು. ಬಳಿಕ ಟಿಆರ್‌ಎಸ್‌ ಕೂಡ ಪ್ರಧಾನಿ ಮೋದಿಯವರನ್ನು ಟೀಕಿಸುವ ಅನೇಕ ಹೋರ್ಡಿಂಗ್ಸ್‌ಗಳನ್ನು ನಗರದಲ್ಲಿ ಪ್ರದರ್ಶಿಸಿದೆ. ಮೋದಿ ಅವರನ್ನು ಸ್ವಾಗತಿಸಲು ಕೂಡ ಸಿಎಂ ಪದೇಪದೆ ತಪ್ಪಿಸಿಕೊಳ್ಳುತ್ತಿರುವುದು ಮತ್ತು ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿರುವುದೂ ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಟಿಆರ್‌ಎಸ್‌ ನಾಯಕ ಎಂ ಕೃಶಾಂಕ್‌ ಮಾಡಿರುವ ಟ್ವೀಟ್‌ನಲ್ಲಿ ” ಅಚ್ಛೇದಿನ್‌ ಬಿಸ್ಕತ್-ಮೋದಿಯವರ ಅಚ್ಚುಮೆಚ್ಚಿನ ಬಿಸ್ಕತ್‌ʼ ಎಂದು ವ್ಯಂಗ್ಯವಾಡುವ ಬ್ಯಾನರ್‌ನ ಫೋಟೊವನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಎಲ್ಲಿದೆ GOOD DAY ? ಎಂಬ ಶೀರ್ಷಿಕೆ ಕೊಟ್ಟು ಅಣಕಿಸಿದ್ದಾರೆ,

ಆಡಳಿತಾರೂಢ ಟಿಆರ್‌ಎಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ದುರಾಡಳಿತದ ಆರೋಪಗಳನ್ನು ಬಿಜೆಪಿ ಮಾಡಿದ್ದರೆ, ಮೋದಿ ಸರ್ಕಾರದಿಂದ ಏನು ಬದಲಾಗಿದೆ? ಎಂದು ಟಿಆರ್‌ಎಸ್‌ ತಿರುಗೇಟು ಕೊಟ್ಟಿದೆ.

Exit mobile version