ಜೈಪುರ: ರಾಜಸ್ಥಾನದಲ್ಲಿ ಹಸುಗಳಿಗೆ ಹೆಚ್ಚಾಗಿ ಬಾಧಿಸಿ, ಅವುಗಳ ಜೀವವನ್ನೇ ತೆಗೆಯುತ್ತಿರುವ ಮುದ್ದೆ ಚರ್ಮ ರೋಗ (Lumpy Skin Disease) ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಮಂಗಳವಾರ ಜೈಪುರ ರಸ್ತೆಗಳಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದರು. ಅದರಲ್ಲಿ ಬಿಜೆಪಿ ಶಾಸಕ ಪುಷ್ಕರ್ ರಾವತ್ ಅವರಂತೂ ಒಂದು ಹಸುವನ್ನು ಕರೆದುಕೊಂಡೇ ರಾಜಸ್ಥಾನ ವಿಧಾನಸಭೆಗೆ ಹೋಗಿದ್ದರು. ಆದರೆ ಆ ಹಸು ಶಾಸಕರ ಪ್ರತಿಭಟನೆಗೆ ಸಹಕಾರ ಕೊಡಲೇ ಇಲ್ಲ !
ಪುಷ್ಕರ್ ರಾವತ್ ಅವರು ಒಂದು ಕಪ್ಪು-ಬಿಳಿ ಮಿಶ್ರಿತ ಬಣ್ಣ ಇರುವ ಹಸುವನ್ನು ಜತೆಗೆ ಕರೆದುಕೊಂಡು ಅಲ್ಲಿನ ವಿಧಾನ ಸಭೆಗೆ ಹೊರಟಿದ್ದರು. ಅವರ ಕೈಯಲ್ಲಿ ಒಂದು ಕೋಲು ಇತ್ತೂ. ಕಟ್ಟಡದ ಆವರಣಕ್ಕೆ ಹೋಗುತ್ತಿದ್ದಂತೆ ಮಾಧ್ಯಮ ಸಿಬ್ಬಂದಿ ಎದುರಾಗಿ, ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಈ ವೇಳೆ ಹಸುವನ್ನು ಶಾಸಕರ ಜತೆಗಿದ್ದ ಒಬ್ಬಾತ ಹಿಡಿದುಕೊಂಡಿದ್ದ. ಅತ್ತ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತ, ‘ಹಸುಗಳು ಮುದ್ದೆ ಚರ್ಮರೋಗದಿಂದ ಜೀವವನ್ನೇ ಬಿಡುತ್ತಿವೆ, ಆದರೆ ರಾಜಸ್ಥಾನ ಸರ್ಕಾರ ನಿದ್ದೆ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸುತ್ತಿದ್ದರು. ಆದರೆ ಅದೇನಾಯಿತೋ..ಇತ್ತ ಹಸು ಹಿಂತಿರುಗಿ ವೇಗವಾಗಿ ಓಡಿ ಹೋಯಿತು. ಅದನ್ನು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಈ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನಗೆಪಾಟಲಿಗೀಡಾಗಿದೆ.
ರಾಜಸ್ಥಾನದಲ್ಲಿ ಮುದ್ದೆ ಚರ್ಮರೋಗ ಹಸುಗಳನ್ನು ತೀವ್ರವಾಗಿ ಬಾಧಿಸುತ್ತಿದೆ. ಈ ಕಾಯಿಲೆಯಿಂದ ಇಲ್ಲಿಯವರೆಗೆ ಸುಮಾರು 59,027 ಹಸುಗಳು ಮೃತಪಟ್ಟಿವೆ, 13,02,907ಕ್ಕೂ ಹೆಚ್ಚು ಹಸುಗಳಿಗೆ ಸೋಂಕು ತಗುಲಿದೆ ಎಂದು ಅಲ್ಲಿನ ಪಶುಸಂಗೋಪನಾ ಇಲಾಖೆ ಡಾಟಾ ತಿಳಿಸಿದೆ. ಈ ರೋಗದಿಂದಾಗಿ ಜೈಪುರದಲ್ಲಿ ಹಸುವಿನ ಹಾಲಿಗೂ ಕೊರತೆಯಾಗಿದೆ. ಹಾಲಿನಿಂದ ತಯಾರಿಸಲಾಗುವ ಸಿಹಿ ತಿನಿಸುಗಳ ಬೆಲೆಯೂ ಏರಿಕೆಯಾಗಿದೆ. ರಾಜ್ಯದ ಅತ್ಯಂತ ದೊಡ್ಡ ಹಾಲು ಸಂಗ್ರಹ ಸಹಕಾರಿ ಸಂಘವೆನಿಸಿದ ಜೈಪುರ ಡೇರಿ ಫೆಡರೇಶನ್ನಲ್ಲಿಯೇ ಹಾಲಿನ ಸಂಗ್ರಹ ಪ್ರಮಾಣ ಶೇ.15-18ರಷ್ಟು ಕಡಿಮೆಯಾಗಿದೆ.
ಇಷ್ಟೆಲ್ಲ ಆದರೂ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ತಡೆಯಲು ಬಂದ ಪೊಲೀಸರ ಜತೆಯೂ ಸಂಘರ್ಷಕ್ಕೆ ಇಳಿದಿದ್ದಾರೆ. ಬ್ಯಾರಿಕೇಡ್ಗಳನ್ನು ಮುರಿದು, ರಾಜ್ಯ ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ರಾಹುಲ್ ಗಾಂಧಿಯೇ ಎಐಸಿಸಿ ಅಧ್ಯಕ್ಷರಾಗಲಿ ಎಂದು ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಕಾಂಗ್ರೆಸ್