ಪಾಟ್ನಾ: ಹಿಂದು ದೇವತೆಗಳನ್ನು ಅವಮಾನಿಸುವುದು ಹೊಸದಲ್ಲ. ಈಗಾಗಲೇ ಅನ್ಯಧರ್ಮೀಯರು, ನಮ್ಮದೇ ಧರ್ಮದ ಹಲವರು ಈ ಕೆಲಸ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾದವರು ಬಿಜೆಪಿ ಶಾಸಕ ಲಲನ್ ಪಾಸ್ವಾನ್. ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರಪೈಂಟಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಆಗಿರುವ ಲಲನ್ ಪಾಸ್ವಾನ್ ಲಕ್ಷ್ಮೀ ದೇವಿಯನ್ನು ಅಪಮಾನಿಸುವ ಮಾತುಗಳನ್ನಾಡಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಭಾಗಲ್ಪುರದ ಶೆರ್ಮಾರಿ ಬಜಾರ್ನಲ್ಲಿ ಲಲನ್ ಪಾಸ್ವಾನ್ ಪ್ರತಿಕೃತಿಯನ್ನು ದಹಿಸಲಾಗಿದೆ.
ಲಲನ್ ಪಾಸ್ವಾನ್ ಅವರು ಲಕ್ಷ್ಮೀ ದೇವಿ ವಿಚಾರದಲ್ಲಿ ಹಿಂದುಗಳಿಗೆ ಇರುವ ನಂಬಿಕೆಯನ್ನೇ ಪ್ರಶ್ನಿಸುವ ಮಾತುಗಳನ್ನಾಡಿದ್ದಾರೆ. ಲಕ್ಷ್ಮೀ ಹಣದ ದೇವತೆ. ಸಿರಿಸಂಪತ್ತಿಗಾಗಿ ಲಕ್ಷ್ಮೀ ಆರಾಧನೆ ಮಾಡಬೇಕು ಎಂಬುದು ಹಿಂದುಗಳ ಧಾರ್ಮಿಕ ನಂಬಿಕೆ. ಆದರೆ ಇದು ತಪ್ಪು ಎಂದಿರುವ ಲಲನ್ ಪಾಸ್ವಾನ್ ‘ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಮಾತ್ರ ಧನಿಕರಾಗುತ್ತಾರೆ ಎಂದಾದರೆ ಮುಸ್ಲಿಮರಲ್ಲಿ ಯಾರೂ ಶ್ರೀಮಂತರು ಇರುತ್ತಲೇ ಇರಲಿಲ್ಲ. ಮುಸ್ಲಿಮರೇನು ಲಕ್ಷ್ಮಿಪೂಜೆ ಮಾಡುತ್ತಾರಾ? ಹಾಗಂತ ಅವರಲ್ಲಿ ಸಿರಿವಂತರೇ ಇಲ್ಲವೇ? ಮುಸ್ಲಿಮರು ಸರಸ್ವತಿ ಪೂಜೆ ಮಾಡುವುದಿಲ್ಲ..ಹಾಗಿದ್ದಾಗ್ಯೂ ಅವರಲ್ಲಿ ವಿದ್ವಾಂಸರು, ಪಂಡಿತರು ಇದ್ದಾರೆ. ಐಎಎಸ್, ಐಪಿಎಸ್ ಓದಿದವರೂ ಇದ್ದಾರೆ. ಭಜರಂಗಬಲಿಯನ್ನು ಶಕ್ತಿ ಮತ್ತು ಬಲದ ದೇವರೆಂದು ಪೂಜಿಸುತ್ತೇವೆ. ಆದರೆ ಕ್ರಿಶ್ಚಿಯನ್-ಮುಸ್ಲಿಮರು ಅವನನ್ನು ಪೂಜಿಸುವುದಿಲ್ಲ. ಆದರೂ ಅವರಲ್ಲಿ ಶಕ್ತವಂತರು, ಸಬಲರು ಇದ್ದಾರೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ‘ಆತ್ಮ-ಪರಮಾತ್ಮ’ ಎಂಬುದೆಲ್ಲ ಕೇವಲ ಜನರ ನಂಬಿಕೆಗಳಷ್ಟೇ ಎಂದೂ ವಿಶ್ಲೇಷಿಸಿದ್ದಾರೆ.
ಒಂದು ಕಲ್ಲಿನ ವಿಗ್ರಹವನ್ನು ನೀವು ದೇವರೆಂದು ನಂಬಿದರೆ ಅದು ದೇವರು. ಇಲ್ಲದೆ ಇದ್ದರೆ ಅದೊಂದು ಕಲ್ಲು. ವೈಜ್ಞಾನಿಕತೆಯ ಆಧಾರದ ಮೇಲೆ ನಮ್ಮ ಆಲೋಚನೆ ಇರಬೇಕು. ಆ ಮೂಲಕವೇ ತಾರ್ಕಿಕ ತೀರ್ಮಾನಕ್ಕೆ ಬರಬೇಕು. ಯಾವಾಗ ನೀವು ಇಂಥದ್ದನ್ನೆಲ್ಲ ನಂಬುವುದನ್ನು ಬಿಡುತ್ತೀರೋ, ಆಗಲೇ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದೂ ಲಲನ್ ಪಾಸ್ವಾನ್ ತಿಳಿಸಿದ್ದಾರೆ. ಲಲನ್ ಅವರ ಈ ಮಾತುಗಳು ಹಿಂದು ಧರ್ಮೀಯರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ.