ಪಾಟ್ನಾ: ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಗಲಾಟೆ ಮಾಡುವುದು, ಪ್ರತಿಭಟನೆ ನಡೆಸುವುದು ಹೊಸದಲ್ಲ. ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಇದು ನಡೆಯುತ್ತಿರುತ್ತದೆ. ಯಾವುದೇ ಜನಪ್ರತಿನಿಧಿ ಮಿತಿಮೀರಿ ಗಲಾಟೆ ಮಾಡುತ್ತ, ಅವರನ್ನು ನಿಯಂತ್ರಿಸಲು ಸ್ಪೀಕರ್ಗೆ ಸಾಧ್ಯವಾಗದೆ ಇದ್ದಾಗ ಮಾರ್ಷಲ್ಗಳ ಎಂಟ್ರಿಯಾಗುವುದನ್ನೂ ನಾವು ಎಷ್ಟೋ ಸಲ ನೋಡಿದ್ದೇವೆ. ಈಗ ಬಿಹಾರ ವಿಧಾನಸಭೆಯಲ್ಲಿ ಹೀಗೇ ಆಗಿದೆ. ಬಿಜೆಪಿ ಶಾಸಕ ಜೀವೇಶ್ ಮಿಶ್ರಾ ಎಂಬುವರು ವಿಪರೀತ ಗಲಾಟೆ ಮಾಡಿದ ಕಾರಣಕ್ಕೆ, ಅವರನ್ನು ನಿಯಂತ್ರಿಸಲಾಗದೆ, ಅಂತಿಮವಾಗಿ ವಿಧಾನಸಭೆ ಮಾರ್ಷಲ್ಗಳು ಪ್ರವೇಶ ಮಾಡಿದ್ದಾರೆ. ಜೀವೇಶ್ ಮಿಶ್ರಾರನ್ನು ಮಾರ್ಷಲ್ಗಳು ಎತ್ತಿಕೊಂಡು ಹೋಗಿ, ಬಿಹಾರ ವಿಧಾನಸಭೆ ಕಟ್ಟಡದ ಹೊರಗೆ ಬಿಟ್ಟಿದ್ದಾರೆ. ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬಿಹಾರದಲ್ಲಿ ಶ್ರೀರಾಮನವಮಿ ದಿನ ಕೋಮುಗಲಭೆಯಾಗಿತ್ತು. ಹಿಂದುಗಳ ಮೆರವಣಿಗೆ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದರು. ಅದೇ ವಿಷಯವಾಗಿ ಬಿಹಾರ ವಿಧಾನಸಭೆಯಲ್ಲಿ ಇಂದು ಜೀವೇಶ್ ಮಿಶ್ರಾ ಅವರು ಗಲಾಟೆ ಸೃಷ್ಟಿಸಿದ್ದರು. ಅವರನ್ನು ಸಮಾಧಾನವಾಗಿ ಕುಳಿತುಕೊಳ್ಳುವಂತೆ ಸ್ಪೀಕರ್ ಎಷ್ಟೇ ಹೇಳಿದರೂ, ಅವರು ಕೇಳಲಿಲ್ಲ. ಇದರಿಂದ ಕೋಪಗೊಂಡ ಸ್ಪೀಕರ್ ಮಾರ್ಷಲ್ಗಳನ್ನು ಕರೆಸಿದ್ದಾರೆ. ಒಳಗೆ ಬಂದ ಮಾರ್ಷಲ್ಗಳು ಶಾಸಕ ಜೀವೇಶ್ ಮಿಶ್ರಾರನ್ನು ಎತ್ತಿಕೊಂಡು ಹೋಗಿ ಹೊರಗೆ ಬಿಟ್ಟಿದ್ದಾರೆ. ಆರು ಮಂದಿ ಮಾರ್ಷಲ್ಗಳು ಜೀವೇಶ್ ಅವರ ಕೈಕಾಲುಗಳನ್ನು ಹಿಡಿದು, ಎತ್ತಿಕೊಂಡು ಹೋಗಿದ್ದಾರೆ. ಈ ಸ್ಥಿತಿಯಲ್ಲಿ ಹೊರಬರುತ್ತಿರುವ ಶಾಸಕ ಜೀವೇಶ್ ಮಿಶ್ರಾ ‘ಇಲ್ನೋಡಿ, ಬಿಹಾರದಲ್ಲಿ ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಇದು..ಇದು ದ್ವೇಷವಲ್ಲದೆ ಇನ್ನೇನು’ ಎಂದು ಹೇಳಿದ್ದಾರೆ.
ಬಿಹಾರದ ಶ್ರೀರಾಮನವಮಿ ಸಂಘರ್ಷಕ್ಕೆ ನಿತೀಶ್ ಕುಮಾರ್ ನೇತೃತ್ವದ ಮಹಾಘಟ್ಬಂಧನ್ ಸರ್ಕಾರ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಬಿಹಾರದಲ್ಲಿ ಓಲೈಕೆ ಆಡಳಿತ ನಡೆಯುತ್ತಿದೆ. ಅಲ್ಪಸಂಖ್ಯಾತರ ಮತಕ್ಕಾಗಿ ಬಹುಸಂಖ್ಯಾತ ಹಿಂದುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ನಿತೀಶ್ ಕುಮಾರ್ ‘ಬಿಹಾರದಲ್ಲಿ ಈಗ ಎಲ್ಲ ಕಡೆ ಶಾಂತಿ ಸ್ಥಾಪಿತವಾಗಿದೆ. ಅದರಲ್ಲೂ ಹೆಚ್ಚಾಗಿ ಗಲಾಟೆ ನಡೆದ ರೋಹ್ಟಾಸ್, ನಳಂದಾಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ನಮ್ಮ ಆಡಳಿತದಲ್ಲಿ ಏನೂ ವೈಫಲ್ಯವಾಗಿಲ್ಲ. ಶ್ರೀರಾಮನವಮಿ ದಿನ ನಡೆದ ಸಂಘರ್ಷ ಒಂದು ಪಿತೂರಿ’ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿಯನ್ನೇ ಅವರು ದೂಷಿಸಿದ್ದಾರೆ.