Site icon Vistara News

Hanuman Chalisa: ಬಿಹಾರ ವಿಧಾನಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಬಿಜೆಪಿ ಶಾಸಕರು, ಕಾರಣವೇನು?

BJP MLAs Recite Hanuman Chalisa Inside Bihar Assembly

ಹನುಮಾನ್‌ ಚಾಲೀಸಾ

ಪಟನಾ: ಜೀವನದಲ್ಲಿ ಶಾಂತಿ ನೆಲೆಸಲು, ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಹನುಮಾನ್‌ ಚಾಲೀಸಾವನ್ನು (Hanuman Chalisa) ಪಠಿಸುತ್ತಾರೆ. ಭಗವಾನ್ ಆಂಜನೇಯನನ್ನು ಸ್ಮರಿಸಲು, ಸ್ತುತಿಸಲು ಹನುಮಾನ್‌ ಚಾಲೀಸಾವನ್ನು ಪಠಿಸಲಾಗುತ್ತದೆ. ಆದರೆ, ಹನುಮಾನ್‌ ಚಾಲೀಸಾ ಈಗ ಪ್ರತಿಭಟನೆಯ ಸಂಕೇತವೂ ಆಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಹನುಮಾನ್‌ ಚಾಲೀಸಾ ಪಠಿಸುವ ಮೂಲಕ ಮಹಾಘಟಬಂಧನ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಸದನದ ಕಲಾಪ ಆರಂಭವಾಗುತ್ತಲೇ ಬಿಹಾರ ಸಚಿವ ಇಸ್ರೈಲ್‌ ಮನ್ಸೂರಿ ಅವರನ್ನು ಅಧಿವೇಶನದಿಂದ ಕೈಬಿಡಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು. ಇದೇ ವೇಳೆ ಅವರು ಸದನದ ಬಾವಿಗಿಳಿದು ಆಡಳಿತಾರೂಢ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ, ಬಿಜೆಪಿ ಶಾಸಕರು ಸಾಮೂಹಿಕವಾಗಿ ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಹನುಮಾನ್‌ ಚಾಲೀಸಾ ಪಠಿಸಿದ ವಿಡಿಯೊ ಇಲ್ಲಿದೆ

ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟನೆ ವ್ಯಕ್ತಪಡಿಸುತ್ತಲೇ ವಿಧಾನಸಭೆ ಸ್ಪೀಕರ್‌, ಕಲಾಪವನ್ನು ಮುಂದೂಡಿದರು. ಇದಾದ ಬಳಿಕ ಮತ್ತೆ ಸದನ ಆರಂಭವಾಗಿ, ಬಜೆಟ್‌ ಕುರಿತು ಚರ್ಚೆ ಪ್ರಾರಂಭವಾಗುತ್ತಲೇ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಸ್ಪೀಕರ್‌ ಕೊನೆಗೆ ಸೋಮವಾರಕ್ಕೆ ಸದನವನ್ನು ಮುಂದೂಡಿದರು.

ಪ್ರತಿಭಟನೆ ಏಕೆ?

ಇಸ್ರೈಲ್‌ ಮನ್ಸೂರಿ ಅವರು ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂಬುದು ಬಿಜೆಪಿ ಶಾಸಕರ ಆರೋಪವಾಗಿದೆ. “ಇಸ್ರೈಲ್‌ ಮನ್ಸೂರಿ ಅವರು ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಮೃತ ವ್ಯಕ್ತಿಯೊಬ್ಬರ ತಾಯಿಯು ಪೊಲೀಸ್‌ ಠಾಣೆಯಲ್ಲಿ ಕೂತಿದ್ದಾರೆ. ಅವರ ಸಂಬಂಧಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಆದರೂ, ಏಕೆ ಪೊಲೀಸರು ಮನ್ಸೂರಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ” ಎಂದು ಬಿಜೆಪಿ ಶಾಸಕರು ಪ್ರಶ್ನಿಸಿದ್ದಾರೆ. ಹಾಗಾಗಿ, ಅವರನ್ನು ಕಲಾಪದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಪಕ್ಷೇತರ ಸಂಸದೆ ನವನೀತ್‌ ರಾಣಾ ಹಾಗೂ ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ಅವರು ಆಗ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ದಂಪತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Hanuman Chalisa: ಯುಟ್ಯೂಬ್‌ನಲ್ಲಿ 300 ಕೋಟಿ ವೀಕ್ಷಣೆ ಕಂಡ ಹನುಮಾನ್‌ ಚಾಲೀಸಾ; ಹೆಚ್ಚು ವೀಕ್ಷಣೆ ಪಡೆದ ದಾಖಲೆ

Exit mobile version