Site icon Vistara News

ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಬೆಂಬಲ ಪಡೆದು ಹೊಸ ಸರ್ಕಾರ ರಚನೆಗೆ ಬಿಜೆಪಿ ಸಜ್ಜು

devendra fadnvis

ಮುಂಬಯಿ: ಮಹಾರಾಷ್ಟ್ರದಲ್ಲಿ ಶಿವಸೇನಾದ ಬಂಡಾಯ ನಾಯಕ ಏಕನಾಥ್‌ ಶಿಂಧೆ ಅವರ ಬಣದ ಬೆಂಬಲದೊಂದಿಗೆ ಅಘಾಡಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚನೆಗೆ ಬಿಜೆಪಿ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ.

ರೆಬೆಲ್‌ ಶಾಸಕರ ಅನರ್ಹತೆ ನೋಟಿಸ್‌ಗೆ ಸಂಬಂಧಿಸಿ ಉತ್ತರಿಸಲು ಮಹಾರಾಷ್ಟ್ರದ ಡೆಪ್ಯುಟಿ ಸ್ಪೀಕರ್‌ ಹಾಗೂ ರೆಬೆಲ್‌ ಶಾಸಕರಿಗೆ ಜುಲೈ ೧೨ರ ತನಕ ಸುಪ್ರೀಂಕೋರ್ಟ್‌ ಕಾಲಾವಕಾಶ ನೀಡಿದೆ. ಹೀಗಾಗಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಅಷ್ಟರೊಳಗೆ ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆಯಲ್ಲಿದೆ.

ಏಕನಾಥ್‌ ಶಿಂಧೆ ಮುಂಬಯಿಗೆ ಒಂದೆರಡು ದಿನಗಳಲ್ಲಿ ಮುಂಬಯಿಗೆ ಬರಲಿದ್ದು, ರಾಜ್ಯಪಾಲ ಬಿಎಸ್‌ ಕೋಶ್ಯಾರಿ ಅವರನ್ನು ಭೇಟಿಯಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚನೆ ಗೊತ್ತುವಳಿ ಮಂಡನೆಗೆ ಒತ್ತಾಯಿಸುವ ನಿರೀಕ್ಷೆ ಇದೆ.

ಬಿಜೆಪಿಯಿಂದಲೇ ರಾಜ್ಯಪಾಲರಿಗೆ ಪತ್ರ?

ಮತ್ತೊಂದು ಕಾರ್ಯತಂತ್ರವಾಗಿ ಸ್ವತಃ ಬಿಜೆಪಿಯೇ ರಾಜ್ಯಪಾಲರಿಗೆ ಅವಿಶ್ವಾಸ ಸೂಚನೆ ಗೊತ್ತುವಳಿಗೆ ಮನವಿ ಸಲ್ಲಿಸಲಿದೆ. ರಾಜ್ಯಪಾಲರು ಬಳಿಕ ಇದಕ್ಕಾಗಿ ವಿಶೇಷ ಅಧಿವೇಶನ ಕರೆದರೆ, ಶಿವಸೇನಾದ ರೆಬೆಲ್‌ ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ. ಆಗ ಅಘಾಡಿ ಸರ್ಕಾರ ಕುಸಿಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶನಿವಾರ ಅಥವಾ ಭಾನುವಾರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದಾರೆ.

ಹೈಕಮಾಂಡ್‌ ಆದೇಶಕ್ಕೆ ಕಾಯುತ್ತಿದೆ ರಾಜ್ಯ ಬಿಜೆಪಿ

ಮಹಾರಾಷ್ಟ್ರ ಬಿಜೆಪಿ ಘಟಕವು ತನ್ನ ದಾಳವನ್ನು ಉರುಳಿಸಲು ಸಜ್ಜಾಗಿದ್ದು, ಪಕ್ಷದ ಹೈಕಮಾಂಡ್‌ ಆದೇಶದ ನಿರೀಕ್ಷೆಯಲ್ಲಿದೆ. ರೆಬೆಲ್‌ ಶಾಸಕರ ಅನರ್ಹತೆ ನೋಟಿಸ್‌ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 11ಕ್ಕೆ ಮುಂದೂಡಿರುವುದರಿಂದ ಶಾಸಕರಿಗೆ ರಿಲೀಫ್‌ ಸಿಕ್ಕಂತಾಗಿದೆ. ಹೀಗಾಗಿ ಅಷ್ಟರೊಳಗೆ ಅಘಾಡಿ ಸರ್ಕಾರವನ್ನು ಉರುಳಿಸಲು ಶಿಂಧೆ ಬಣ ತವಕದಲ್ಲಿದೆ.

ಜುಲೈ ೧೧ರೊಳಗೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಗೆಲ್ಲಲು ಉದ್ಧವ್‌ ಠಾಕ್ರೆ ಸರ್ಕಾರ ಕೂಡ ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಜತೆ ವಿಲೀನ ಅನಗತ್ಯ?

ಶಿವಸೇನಾದಿಂದ ಬಂಡಾಯ ಎದ್ದಿರುವ ಶಿಂಧೆ ಬಣವು ಬಿಜೆಪಿ ಜತೆ ವಿಲೀನ ಆಗಬೇಕಾದ ಅಗತ್ಯ ಇಲ್ಲ. ಶಿಂಧೆ ಬಣಕ್ಕೆ ಬಹುಮತ ಇರುವುದರಿಂದ ಅದುವೇ ನಿಜವಾದ ಶಿವಸೇನಾ ಆಗಿದೆ. ಡೆಪ್ಯುಟಿ ಸ್ಪೀಕರ್‌ ಕಾನೂನಿಗೆ ವಿರುದ್ಧ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಯತ್ನಿಸಿದರೆ ರಾಜ್ಯಪಾಲರು ಕ್ರಮ ಕೈಗೊಳ್ಳಬಹುದು ಎಂದು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

Exit mobile version