ನವ ದೆಹಲಿ: ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ (Anil Firojiya) ಸದ್ಯ ಸಖತ್ ಟ್ರೆಂಡ್‌ನಲ್ಲಿದ್ದಾರೆ ಮತ್ತು ಒಂದು ಒಳ್ಳೆಯ ಕಾರಣಕ್ಕೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ನೀಡಿದ ಒಂದು ಸವಾಲು ಮತ್ತು ಒಡ್ಡಿದ ಆಮಿಷದಿಂದಾಗಿ, ಅನಿಲ್ ಫಿರೋಜಿಯಾ ತಮ್ಮ ತೂಕ ಇಳಿಸುತ್ತಿದ್ದಾರೆ. ಭರ್ಜರಿ ವ್ಯಾಯಾಮಗಳು, ಯೋಗದಲ್ಲಿ ತೊಡಗಿದ್ದಾರೆ. ತಾವು ಫಿಟ್ ಆಗಲೇಬೇಕು ಎಂದು ಹಠ ತೊಟ್ಟಿದ್ದಾರೆ. ಇವರಿಗೆ ಸಚಿವ ನಿತಿನ್ ಗಡ್ಕರಿ ಆಮಿಷವೊಡ್ಡಿದ್ದು ಹೌದಾದರೂ ಅದೂ ಕೂಡ ಒಂದೊಳ್ಳೆ ಆಮಿಷವೇ ಆಗಿದೆ !
ಅನಿಲ್ ಫಿರೋಜಿಯಾ 127 ಕೆಜಿ ತೂಕ ಇದ್ದರು. ಫೆಬ್ರವರಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಅವರು ಭೇಟಿಯಾದಾಗ, ಸಚಿವರು ಹೀಗೆ ಮಾತನಾಡುತ್ತ ʼನಿಮ್ಮ ತೂಕ ತುಂಬ ಜಾಸ್ತಿಯಾಯಿತು. ನೀವು ತೂಕ ಇಳಿಸಬೇಕು. ನೀವು ಇಳಿಸುವ ಪ್ರತಿ ಕೆಜಿಗೂ ನನ್ನ ಸಚಿವಾಲಯದಿಂದ 1000 ಕೋಟಿ ರೂ. ಕೊಡುತ್ತೇನೆ. ಒಟ್ಟಾರೆ ಎಷ್ಟು ಕೆಜಿ ಇಳಿಸುತ್ತೀರೋ ಅಷ್ಟು ಹಣ ಸಿಗುತ್ತದೆ. ಇದರಿಂದ ನಿಮ್ಮ ಕ್ಷೇತ್ರದಲ್ಲೂ ರಸ್ತೆ-ಹೆದ್ದಾರಿ ಅಭಿವೃದ್ಧಿ ಮಾಡಿಕೊಳ್ಳಬಹುದು ನೋಡಿʼ ಎಂದು ಹೇಳಿದ್ದಾರೆ. ಅದನ್ನು ಅನಿಲ್ ಫಿರೋಜಿಯಾ ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ 4ತಿಂಗಳಲ್ಲಿ 15 ಕೆಜಿ ಇಳಿಸಿದ್ದಾರೆ. ಅಷ್ಟಾದರೂ ಅವರ ತೂಕ 100ರ ಮೇಲೆ ತೂಗುತ್ತಿದ್ದು, ಆದಷ್ಟು ಬೇಗ ನೂರರ ಒಳಗೆ ಬರುವುದಾಗಿಯೂ ಹೇಳಿಕೊಂಡಿದ್ದಾರೆ.
ಹೇಗಾದರೂ ಸರಿ ತೂಕ ಇಳಿಸಿಕೊಂಡು, ಕೇಂದ್ರ ಹೆದ್ದಾರಿ ಸಚಿವಾಲಯದಿಂದ ತಮ್ಮ ಕ್ಷೇತ್ರಕ್ಕೆ ಹೆಚ್ಚೆಚ್ಚು ಅನುದಾನ ತರಲೇಬೇಕು ಎಂದು ಪ್ರಯತ್ನಿಸುತ್ತಿರುವ ಸಂಸದ ಫಿರೋಜಿಯಾ, ನಾಲ್ಕು ತಿಂಗಳಿಂದ ಕಠಿಣ ಡೆಯಟ್ ಅನುಸರಿಸುತ್ತಿದ್ದಾರೆ. ದಿನದಲ್ಲಿ 2-3 ತಾಸು ವರ್ಕೌಟ್ ಮಾಡುತ್ತಿದ್ದಾರೆ. ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡಿ ಬೆವರು ಸುರಿಸುತ್ತಿದ್ದಾರೆ. ಇದೆಲ್ಲವನ್ನೂ ಅವರು ನಾಗ್ಪುರದ ಆಯುರ್ವೇದ ತಜ್ಞರೊಬ್ಬರ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿಯೇ ಮಾಡುತ್ತಿದ್ದಾರೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್, ಕಾರು, ಬಸ್ ಆಯ್ತು; ಸದ್ಯವೇ ಬರಲಿದೆ ಟ್ರಕ್, ಟ್ರ್ಯಾಕ್ಟರ್!
ತಮ್ಮ ಡಯೆಟ್ ಬಗ್ಗೆ ಮಾಹಿತಿ ನೀಡಿದ ಅವರು, ʼತೂಕ ಇಳಿಸಿಕೊಳ್ಳಲು ನಿಷ್ಠೆಯಿಂದ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿ ವಾರ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದೇನೆ. ಸದ್ಯ ನನ್ನ ತೂಕ 112ಕೆಜಿಗೆ ಬಂದು ನಿಂತಿದೆ. ಅದು ಸಾಲದು. ನಾನು 100 ಕೆಜಿ ಒಳಗೆ ಬರಬೇಕು. ಇನ್ನು ಅನುದಾನದ ವಿಚಾರಕ್ಕೆ ಬಂದರೆ, ನಿತಿನ್ ಗಡ್ಕರಿ ಕೊಟ್ಟ ಭರವಸೆ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಕೆಲವೇ ದಿನಗಳಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಅದರಲ್ಲಿ ನಾನು ಕೇಳುತ್ತೇನೆ. ಈಗಾಗಲೇ 15ಕೆಜಿ ಇಳಿಸಿದ್ದರಿಂದ 15 ಸಾವಿರ ಕೋಟಿ ರೂಪಾಯಿ ಕೊಟ್ಟೇ ಕೊಡುತ್ತಾರೆ ಎಂಬ ಭರವಸೆ ಹೊಂದಿದ್ದೇನೆʼ ಎಂದು ಹೇಳಿದ್ದಾರೆ.
ಈಗ ಅನಿಲ್ ಫಿರೋಜಿಯಾ ಅವರಿಗೆ ತೂಕ ಇಳಿಸಿಕೊಳ್ಳುವಂತೆ ಹೇಳಿದ ಸಚಿವ ನಿತಿನ್ ಗಡ್ಕರಿ ಕೂಡ ಹಿಂದೆ 135 ಕೆಜಿ ಇದ್ದರು. ಬಳಿಕ ಸತತ ಡಯೆಟ್‌ನಿಂದ 93 ಕೆಜಿಗೆ ಇಳಿದಿದ್ದಾರೆ. ಈ ಬಗ್ಗೆ ಅವರೇ ಒಮ್ಮೆ ಹೇಳಿಕೊಂಡಿದ್ದರು. ಅದೇನೇ ಆದರೂ, ಅನಿಲ್ ಫಿರೋಜಿಯಾ ಇಷ್ಟು ತೂಕ ಇರುವುದು ಖಂಡಿತ ಒಳ್ಳೆಯದಂತೂ ಅಲ್ಲ. ಅದನ್ನು ಇಳಿಸುತ್ತಿರುವುದರಿಂದ ಅವರ ಆರೋಗ್ಯಕ್ಕೂ ಒಳ್ಳೆಯದು, ಹಣ ಕೊಡುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿದ್ದರಿಂದ ಅವರ ಲೋಕಸಭಾ ಕ್ಷೇತ್ರಕ್ಕೂ ಒಳ್ಳೆಯದೇ..!
ಇದನ್ನೂ ಓದಿ: ಹೈವೇ ನಿರ್ಮಾಣದಲ್ಲಿ ಅದ್ಭುತ ಸಾಧನೆ; ಗಿನ್ನಿಸ್ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ