Site icon Vistara News

member of parliament : ರಾಹುಲ್ ಗಾಂಧಿಯಂತೆ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಯುಪಿಯ ಬಿಜೆಪಿ ಎಂಪಿ

Ram katheria

ಆಗ್ರಾ: 2011ರಲ್ಲಿ ದಾಖಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ರಾಮ್ ಶಂಕರ್ ಕಥೇರಿಯಾ ಅವರಿಗೆ ಆಗ್ರಾ ನ್ಯಾಯಾಲಯ ಶನಿವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಕೇಂದ್ರ ಸಚಿವರಾಗಿರುವ ಕಥೇರಿಯಾ 2011ರಲ್ಲಿ ವಿದ್ಯುತ್ ಸರಬರಾಜು ಕಂಪನಿಯ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ ಅವರು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾದ ರಾಹುಲ್ ಗಾಂಧಿ ಲೋಕ ಸಭೆಯಿಂದ ಅನರ್ಹತೆ ಪಡೆದಿದ್ದರು. ಇದೀಗ ಅವರು ಸುಪ್ರೀಮ್​ ಕೋರ್ಟ್​ನಿಂದ ತಡೆ ತಂದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಎಂಪಿಯೊಬ್ಬರು ಅದೇ ರೀತಿ ಅನರ್ಹತೆಗೆ ಒಳಗಾಗುವ ಸಾಧ್ಯತೆಗಳಿವೆ.

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಚುನಾಯಿತ ಪ್ರತಿನಿಧಿಯು ಜನ ಪ್ರತಿನಿಧಿ ಕಾಯ್ದೆ, 1951 ರ ಅಡಿಯಲ್ಲಿ ತಕ್ಷಣದ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕಥೇರಿಯಾ ಕೂಡ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ : Rahul Gandhi: ರಾಹುಲ್‌ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ; ಅವರೀಗ ಸಂಸತ್ತಿಗೆ ತೆರಳಬಹುದೆ?

“… ನಾನು ನ್ಯಾಯಾಲಯಕ್ಕೆ ನಿಯಮಿತವಾಗಿ ಹಾಜರಾಗುತ್ತಿದ್ದೆ. ನ್ಯಾಯಾಲಯ ಇಂದು ನನ್ನ ವಿರುದ್ಧ ತೀರ್ಪು ನೀಡಿದೆ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ, ಮೇಲ್ಮನವಿ ಸಲ್ಲಿಸುವ ಹಕ್ಕು ನನಗಿದೆ. ನಾನು ಅದನ್ನು ಚಲಾಯಿಸುತ್ತೇನೆ ” ಎಂದು ಕಥೇರಿಯಾ ಸುದ್ದಿ ಸಂಸ್ಥೆಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಯಾರಿವರು ರಾಮ್ ಶಂಕರ್ ಕಥೇರಿಯಾ?

ರಾಮ್ ಶಂಕರ್ ಕಥೇರಿಯಾ ಉತ್ತರ ಪ್ರದೇಶದ ಇಟಾವಾ ಕ್ಷೇತ್ರದ ಬಿಜೆಪಿ ಸಂಸದ. ಅವರು ನವೆಂಬರ್ 2014 ರಿಂದ ಜುಲೈ 2016 ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಥೇರಿಯಾ ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿ ಮತ್ತು ಗೃಹ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

2019 ರಲ್ಲಿ, ಆಗ್ರಾದಲ್ಲಿ ಟೋಲ್ ಪ್ಲಾಜಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥೇರಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂಸದರ ಅಂಗರಕ್ಷಕರು ಟೋಲ್ ಪ್ಲಾಜಾ ನೌಕರರನ್ನು ಥಳಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹಲ್ಲೆಯ ದೃಶ್ಯ ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ ಟೋಲ್ ಪ್ಲಾಜಾ ನೌಕರರು ತಮ್ಮ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಬಿಜೆಪಿ ನಾಯಕ ಸಮರ್ಥನೆ ಮಾಡಿಕೊಂಡಿದ್ದಾರೆ.

Exit mobile version