ನವ ದೆಹಲಿ: ಲೋಕಸಭಾ ಚುನಾವಣೆಗೆ ಇನ್ನು 15 ತಿಂಗಳು ಬಾಕಿ ಇದೆ. ಬಿಜೆಪಿ ಸೇರಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ಕಾರ್ಯತಂತ್ರ ಪ್ರಾರಂಭವಾಗಿದೆ. ಈ ಹೊತ್ತಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದು ಪಂಜಾಬ್ ಗುರುದಾಸ್ಪುರ ಸಂಸದ ಸನ್ನಿ ಡಿಯೋಲ್(Sunny Deol). ಬಾಲಿವುಡ್ ನಟರಾಗಿರುವ ಸನ್ನಿಗೆ 2019ರ ಲೋಕಸಭೆ ಚುನಾವಣೆ (Lok Sabha Election)ಯಲ್ಲಿ ಬಿಜೆಪಿ ಗುರುದಾಸ್ಪುರ ಕ್ಷೇತ್ರದಿಂದ ಟಿಕೆಟ್ ಕೊಟ್ಟಿತ್ತು. ನಿರೀಕ್ಷೆ ಸುಳ್ಳು ಮಾಡದೆ, ಅವರು ಗೆದ್ದಿದ್ದಾರೆ. ಆದರೆ ಗೆದ್ದ ಮೇಲೆ ಅವರೇನು ಮಾಡಿದ್ದಾರೆ ಎಂದು ಈಗ ಅವಲೋಕನ ಮಾಡುವಂತ ಸ್ಥಿತಿ ಪಕ್ಷದ ವರಿಷ್ಠರಿಗೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಮ್ಮೆಯೂ ಸನ್ನಿ ಡಿಯೋಲ್ ತಮ್ಮ ಲೋಕಸಭಾ ಕ್ಷೇತ್ರವಾದ ಗುರುದಾಸ್ಪುರಕ್ಕೆ ಭೇಟಿಯನ್ನೇ ಕೊಟ್ಟಿಲ್ಲ. ಇದರಿಂದಾಗಿ ಸನ್ನಿ ಮೇಲೆ ಬಿಜೆಪಿ ನಾಯಕರು ವಿಶ್ವಾಸ ಕಳೆದುಕೊಂಡಿದ್ದಾರೆ, ಅವರು ಮುಂದಿನ ಬಾರಿಯ ಚುನಾವಣೆಯಲ್ಲಿ ಗುರುದಾಸ್ಪುರದಲ್ಲಿ ಬೇರೆ, ಅದರಲ್ಲೂ ಸ್ಥಳೀಯ ನಾಯಕನಿಗೇ ಟಿಕೆಟ್ ಕೊಡಲು ಮುಂದಾಗಿದ್ದರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
2019ರ ಚುನಾವಣೆಯಲ್ಲಿ ಗೆದ್ದ ಸನ್ನಿ ಡಿಯೋಲ್ ಕೊನೇ ಬಾರಿಗೆ ತಮ್ಮ ಕ್ಷೇತ್ರ ಗುರುದಾಸ್ಪುರಕ್ಕೆ ಬಂದಿದ್ದು 2020ರ ಸೆಪ್ಟೆಂಬರ್ನಲ್ಲಿ. ಆಗಲೂ ಕೂಡ ಅವರೇನೂ ಜನರೊಂದಿಗೆ ಬೆರೆತಿಲ್ಲ, ಅವರ ಕುಂದುಕೊರತೆ, ಬೇಕು-ಬೇಡಗಳನ್ನು ಆಲಿಸಿಲ್ಲ. ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿಲ್ಲ. ಬಂದು, ಸ್ಥಳೀಯ ನಾಯಕರನ್ನು ಭೇಟಿಯಾಗಿ ತ್ವರಿತವಾಗಿ ಅಲ್ಲಿಂದ ಹೊರಟೇಹೋಗಿದ್ದಾರೆ. ಅದಾದ ಬಳಿಕ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಂಡರು. ಶೂಟಿಂಗ್ ಸಮಯದಲ್ಲೇ ಕೊವಿಡ್ 19 ಸೋಂಕಿಗೆ ಒಳಗಾದರು. ಭುಜದ ಶಸ್ತ್ರಚಿಕಿತ್ಸೆಯೂ ಆಯಿತು. ಅಷ್ಟೆಲ್ಲ ಆಗಿ ಗುಣಮುಖರಾದ ಮೇಲೆ ಕೂಡ ಅವರು ಇಂದಿನವರೆಗೆ ಒಮ್ಮೆಯೂ ಗುರುದಾಸ್ಪುರಕ್ಕೆ ಬಂದಿಲ್ಲ. ಈಗಾಗಲೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ನಿ ರಾಜೀನಾಮೆ ಕೊಡಬೇಕು ಎಂಬ ಆಗ್ರಹವೂ ಹೆಚ್ಚಾಗಿದೆ. 2022ರಲ್ಲಿ ಒಮ್ಮೆ ಕೆಲವರು ಸನ್ನಿ ಫೋಟೋ ಇರುವ ದೊಡ್ಡ ಪೋಸ್ಟರ್ ಹಾಕಿ, ‘ಕಾಣೆಯಾಗಿದ್ದಾರೆ, ಹುಡುಕಿಕೊಡಿ’ ಎಂಬ ಸಾಲುಗಳನ್ನು ಬರೆದಿದ್ದರು.
ಇದನ್ನೂ ಓದಿ: Vice Presidential Poll | ಉಪರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ; ಎಣಿಕೆ ಪ್ರಾರಂಭ
ಕಳೆದ ವರ್ಷ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆದಾಗ, ಪ್ರಚಾರದ ಸಂದರ್ಭದಲ್ಲೂ ಸನ್ನಿ ಡಿಯೋಲ್ ಪತ್ತೆಯಿಲ್ಲ. ಗುರುದಾಸ್ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಠಾಣ್ಕೋಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅಶ್ವನಿ ಶರ್ಮಾ ಪರ ಒಮ್ಮೆಯೂ ಸನ್ನಿ ಪ್ರಚಾರ ಕೈಗೊಳ್ಳಲಿಲ್ಲ. ಹಾಗಂತ ಅಶ್ವನಿಯೇನೂ ಸೋತಿಲ್ಲ. ಆದರೆ ಒಬ್ಬ ಸಂಸದನಾಗಿ ತನ್ನ ಕರ್ತವ್ಯವನ್ನು ಸನ್ನಿ ಮಾಡಿಲ್ಲ ಎಂದ ಅಸಮಾಧಾನ ಸ್ಥಳೀಯ ಬಿಜೆಪಿ ನಾಯಕರಲ್ಲೂ ಹೊಗೆಯಾಡುತ್ತಿದೆ. ಹೀಗೆ ಗೆದ್ದ ಬಳಿಕ ಪಕ್ಷಕ್ಕಾಗಲೀ, ಕ್ಷೇತ್ರಕ್ಕಾಗಲೀ ಏನೇನೂ ಕೊಡುಗೆ ಕೊಡದ ಸನ್ನಿ ಡಿಯೋಲ್ ಮುಖವನ್ನೇ ತೋರಿಸಿ 2024ರ ಲೋಕಸಭೆಯಲ್ಲಿ ಮತ ಕೇಳುವುದಾದರೂ ಹೇಗೆಂಬ ಸಮಸ್ಯೆ ಬಿಜೆಪಿಯದ್ದು. ಹಾಗೇ, ಈಗಾಗಲೇ ಬೇರೆ ಅಭ್ಯರ್ಥಿಯ ಹುಡುಕಾಟ ನಡೆದಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.