Site icon Vistara News

ಉಚಿತ ಆಮಿಷ ನೀಡಿದವರು ಯಾರು? ಪ್ರಧಾನಿಯ ಕಾಲೆಳೆದ ಬಿಜೆಪಿ ಸಂಸದ ವರುಣ್‌ ಗಾಂಧಿ

varun gandhi

ನವ ದೆಹಲಿ: ಪ್ರತಿಪಕ್ಷಗಳು ಮತದಾರರಿಗೆ “ಮುಫ್ತ್ ಕೆ ರೆವ್ಡಿ” (ಉಚಿತ) ಆಮಿಷ ಒಡ್ಡುತ್ತಿವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ಅವರೇ ಟೀಕಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು, ವಿಶೇಷವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣಾ ಲಾಭಕ್ಕಾಗಿ “ಮಫ್ತ್ ಕಿ ರೇವ್ದಿ” ನೀಡುತ್ತಿದೆ. ಇದು ದೇಶದ ಅಭಿವೃದ್ಧಿಗೆ ತುಂಬಾ ಹಾನಿಕಾರಕವಾಗಿದೆ ಎಂದು ಇತ್ತೀಚೆಗೆ ಪ್ರಧಾನಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಟ್ವೀಟ್‌ ಮಾಡಿರುವ ಉತ್ತರ ಪ್ರದೇಶದ ಪಿಲಿಭಿತ್ ಸಂಸದ ವರುಣ್ ಗಾಂಧಿ, ʼʼಕಳೆದ ಐದು ವರ್ಷಗಳಲ್ಲಿ ಭ್ರಷ್ಟ ಉದ್ಯಮಿಗಳ 10 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಮೆಹುಲ್ ಚೋಕ್ಸಿ ಮತ್ತು ರಿಷಿ ಅಗರ್ವಾಲ್ ಅವರು “ಮಫ್ತ್ ಕಿ ರೆವ್ಡಿ” ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆʼʼ ಎಂದಿದ್ದಾರೆ.

ಟಾಪ್ 10 ಡಿಫಾಲ್ಟರ್ ಸಂಸ್ಥೆಗಳ ಕುರಿತು ಸಂಸತ್ತಿನಲ್ಲಿ ಸರ್ಕಾರ ನೀಡಿರುವ ಉತ್ತರವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ ವರುಣ್‌ ಗಾಂಧಿ. ಚೋಕ್ಸಿ ಮತ್ತು ಅಗರ್ವಾಲ್ ಆ ಪಟ್ಟಿಯಲ್ಲಿದ್ದಾರೆ. “ಬಡವರು ಐದು ಕೆಜಿ ಧಾನ್ಯ ಸ್ವೀಕರಿಸಿದರೆ ಧನ್ಯವಾದ ಹೇಳಬೇಕೆಂದು ನಿರೀಕ್ಷಿಸುವ ಸಂಸತ್ತು ಕಳೆದ ಐದು ವರ್ಷಗಳಲ್ಲಿ ಭ್ರಷ್ಟ ಉದ್ಯಮಿಗಳ ₹ 10 ಲಕ್ಷ ಕೋಟಿ ಕೆಟ್ಟ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಹೇಳುತ್ತದೆ. ಸರ್ಕಾರದ ಖಜಾನೆಯ ಮೇಲೆ ಮೊದಲ ಹಕ್ಕು ಯಾರದು?” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ನೀತಿ ಆಯೋಗದ 7ನೇ ಸಭೆ

ಕೋವಿಡ್-19 ಸಂದರ್ಭದಲ್ಲಿ 80 ಕೋಟಿ ಬಡವರಿಗೆ ಪ್ರಧಾನಿಯವರು ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದ್ದರು ಎಂದು ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಇನ್ನೊಬ್ಬ ಬಿಜೆಪಿ ಸಂಸದರು ನೀಡಿದ್ದ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದು, ಇದಕ್ಕಾಗಿ ಸರ್ಕಾರ ಪ್ರಶಂಸೆಗೆ ಅರ್ಹವಾಗಿದೆ ಎಂದಿದ್ದಾರೆ.

ಇತ್ತೀಚಿಗೆ, ಯಾವುದೇ ರಾಜಕೀಯ ಪಕ್ಷವೂ ಫ್ರೀಬೀಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯನ್ನು ಬಯಸುವುದಿಲ್ಲ, ಯಾಕೆಂದರೆ ಅವು ಮುಂದುವರೆಯಬೇಕೆಂದು ಎಲ್ಲರೂ ಬಯಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯ ಗಮನಿಸಿತ್ತು. ಕೇಂದ್ರ ಸರ್ಕಾರ ಕೂಡ ಇದನ್ನು ಆರ್ಥಿಕ ವಿನಾಶದ ದಾರಿ ಎಂದು ಕರೆದಿತ್ತು. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು, ಈ ಕುರಿತು ಎಲ್ಲಾ ಪಕ್ಷಗಳ ನಡುವೆ ಸಂವಾದಕ್ಕೆ ಸೂಚಿಸಿತ್ತು. “ಇದು ಗಂಭೀರ ಸಮಸ್ಯೆ. ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಮತ್ತು ಸರ್ಕಾರ ಹೇಳಲು ಸಾಧ್ಯವಿಲ್ಲ. ದೇಶದ ಆರ್ಥಿಕತೆಯ ಮೇಲೆ ಅದರ ದುಷ್ಪರಿಣಾಮವನ್ನು ನೋಡುತ್ತಿದ್ದೇವೆʼʼ ಎಂದು ಹೇಳಿತ್ತು.

ಇದನ್ನೂ ಓದಿ: Mamata Banerjee | ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ

Exit mobile version