ನವದೆಹಲಿ: ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವ ಬಿಜೆಪಿಯು ಕೇಂದ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ. ಬಿಜೆಪಿಯು 13 ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ 9 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದು, ಕರ್ನಾಟಕದ ಬಿ.ಎಲ್. ಸಂತೋಷ್ ಅವರು ಮಾತ್ರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಉಳಿದಂತೆ ಕರ್ನಾಟಕದ ಯಾವ ನಾಯಕರೂ ಕೇಂದ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿಲ್ಲ.
ಪಸ್ಮಂದಾ ಮುಸ್ಲಿಂ ಸಮುದಾಯಕ್ಕೆ ಗಾಳ
ಬಿಜೆಪಿಯು ಲೋಕಸಭೆ ಚುನಾವಣೆ ದೃಷ್ಟಿಯಿಂದಲೇ ಬಿಜೆಪಿ ಕೇಂದ್ರೀಯ ಪದಾಧಿಕಾರಿಗಳನ್ನು ನೇಮಿಸಿದೆ. ಅದರಲ್ಲೂ, ವಿಧಾನಪರಿಷತ್ ಮಾಜಿ ಸದಸ್ಯ, ಅಲಿಗಢ ಮುಸ್ಲಿಂ ವಿವಿ ಮಾಜಿ ಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರು ಪಸ್ಮಂದಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯ ಸೇರಿ ಇಡೀ ಮುಸ್ಲಿಂ ಸಮುದಾಯದವರನ್ನು ಸೆಳೆಯಲು ಬಿಜೆಪಿ ಯತ್ನಿಸಿದೆ.
ನೂತನ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ
Bharatiya Janata Party releases list of its central office bearers – Bandi Sanjay Kumar, Radhamohan Agrawal inducted as general secretaries pic.twitter.com/vFfZscJI0B
— ANI (@ANI) July 29, 2023
ಬಂಡಿ ಸಂಜಯ್, ಅನಿಲ್ ಆ್ಯಂಟನಿ ಪ್ರಧಾನ ಕಾರ್ಯದರ್ಶಿ
ತೆಲಂಗಾಣ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹಾಗೂ ರಾಜ್ಯಸಭೆ ಸದಸ್ಯ ರಾಧಾಮೋಹನ್ ಅಗರ್ವಾಲ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಇನ್ನು ಕೆಲ ತಿಂಗಳ ಹಿಂದಷ್ಟೇ ಬಿಜೆಪಿ ಸೇರಿದ ಅನಿಲ್ ಆ್ಯಂಟನಿ ಅವರನ್ನೂ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅನಿಲ್ ಆ್ಯಂಟನಿ ಅವರು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರರಾಗಿದ್ದಾರೆ. ತೆಲಂಗಾಣ ಹಾಗೂ ಕೇರಳವನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಬಂಡಿ ಸಂಜಯ್ ಹಾಗೂ ಅನಿಲ್ ಆ್ಯಂಟನಿ ಅವರಿಗೆ ಹುದ್ದೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Opposition Meet: ಲೋಕಸಭೆಗೆ NDA vs INDIA: ಮೋದಿ ವಿರೋಧಿ ಪ್ರತಿಪಕ್ಷಕ್ಕೆ ಹೊಸ ಹೆಸರು
ಬಿಜೆಪಿಯು ಲೋಕಸಭೆ ಚುನಾವಣೆಗೆ ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಇದೇ ಕಾರಣಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶ, ಪಂಜಾಬ್, ತೆಲಂಗಾಣ ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಿಸಲಾಗಿತ್ತು. ಬಿಜೆಪಿ ಸಂಘಟನೆ ಬಲಪಡಿಸುವುದು, ಲೋಕಸಭೆ ಚುನಾವಣೆ ಸಮೀಪಿಸುವ ವೇಳೆಗೆ ಜನರನ್ನು ಬಿಜೆಪಿಯತ್ತ ಸೆಳೆಯುವುದು, ಕೇಂದ್ರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡುವುದು ಸೇರಿ ಹಲವು ವಿಷಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ರಾಜ್ಯಾಧ್ಯಕ್ಷರು ಸೇರಿ ವಿವಿಧ ಪದಾಧಿಕಾರಿಗಳನ್ನು ನೇಮಿಸುತ್ತಿದೆ.