ನವದೆಹಲಿ: ಈ ವರ್ಷಾಂತ್ಯಕ್ಕೆ ಛತ್ತೀಸ್‌ಗಢ(Chhattisgarh state), ಮಧ್ಯ ಪ್ರದೇಶವು (Madhya Pradesh) ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ(Assembly Election 2023). ಭಾರತೀಯ ಜನತಾ ಪಾರ್ಟಿ(BJP) ಈಗಿನಿಂದಲೇ ಚುನಾವಣೆ ತಯಾರಿಯಲ್ಲಿ ತೊಡಗಿದೆ. ಕೇಂದ್ರ ಚುನಾವಣಾ ಆಯೋಗವು (Central election Commission) ಇನ್ನೂ ವೇಳಾಪಟ್ಟಿ ಪ್ರಕಟಿಸದಿದ್ದರೂ, ಬಿಜೆಪಿ ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (Candidate List) ಬಿಡುಗಡೆ ಮಾಡಿದೆ! ಇದೇ ಮೊದಲ ಬಾರಿಗೆ ಬಿಜೆಪಿ, ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.
90 ಸದಸ್ಯ ಬಲವನ್ನು ಹೊಂದಿರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರೆ, 230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ 39 ಅಭ್ಯರ್ಥಿಗಳನ್ನು ಹೆಸರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದ ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಚುನಾವಣೆ ಘೋಷಣೆಯಾಗುವ ಮುಂಚೆಯೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪಕ್ಷದೊಳಗಿನ ಬಂಡಾಯವನ್ನು ಗುರುತಿಸುವುದು ಸಾಧ್ಯವಾಗಲಿದೆ ಎಂದು ಬಿಜೆಪಿ ಭಾವಿಸಿದೆ. ಹಾಗಾಗಿ, ಪಟ್ಟಿ ಬಿಡುಗಡೆಯಿಂದಾಗಿ ಉದ್ಭವಿಸುವ ಬಂಡಾಯವನ್ನು ಶಮನ ಮಾಡಲು ಇದರಿಂದ ಸಾಧ್ಯವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಕರ್ನಾಟಕದ ಸೋಲಿನಿಂದ ಎಚ್ಚೆತ್ತ ಬಿಜೆಪಿ
ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಚುನಾವಣೆ ಹಿನ್ನಡೆಯಾದ ನಂತರ, ಪಕ್ಷವು ಮತ್ತೊಂದು ಸೋಲು ಎದುರಿಸಲು ಸಿದ್ಧವಾಗಿಲ್ಲ. ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಜೊತೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸೇರಿವೆ. ಈ ರಾಜ್ಯಗಳಲ್ಲಿ ಹೇಗಾದರೂ ಗೆಲ್ಲಲಬೇಕು ಎಂಬ ರಣ ನೀತಿಯನ್ನು ಬಿಜೆಪಿಯು ಹೆಣೆಯುತ್ತಿದೆ.
ಈ ಐದು ರಾಜ್ಯಗಳ ಪೈಕಿ ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಬಿಜೆಪಿ ಆಡಳಿತವಿಲ್ಲ. ಕ್ರಮವಾಗಿ ಮೊದಲೆರಡು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ನಂತರದ ರಾಜ್ಯದಲ್ಲಿ ಬಿಆರ್‌ಎಸ್ ಆಡಳಿತದಲ್ಲಿದೆ. ಇನ್ನು ಮಿಜೋರಾಮ್‌ನಲ್ಲಿ ಬಿಜೆಪಿ ಮಿಜೋ ನ್ಯಾಷನಲ್ ಫ್ರಂಟ್‌ನೊಂದಿಗೆ ಅಧಿಕಾರದಲ್ಲಿದೆ. ಸದ್ಯದ ಮಾಹಿತಿಗಳ ಪ್ರಕಾರ, ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಇದೆ.
ಈ ಸುದ್ದಿಯನ್ನೂ ಓದಿ: ಛತ್ತೀಸ್‌ಗಢ ವಿಧಾನಸಭೆ ಎಲೆಕ್ಷನ್ ಗೆಲ್ಲಲು ಬಿಜೆಪಿ ಪ್ಲ್ಯಾನ್, ಮೋದಿ ನೇತೃತ್ವದಲ್ಲಿ ಸಭೆ
ಮೊದಲ ಪಟ್ಟಿಯಲ್ಲಿ ಯಾರ್ಯಾರು ಇದ್ದಾರೆ?
ಛತ್ತೀಸ್‌ಗಢದ ಪಟ್ಟಿಯಲ್ಲಿನ ಒಂದು ಪ್ರಮುಖ ಅಂಶವೆಂದರೆ ದುರ್ಗ್‌ನ ಲೋಕಸಭಾ ಸಂಸದ ವಿಜಯ್ ಬಘೇಲ್ ಅವರನ್ನು ಕಣಕ್ಕಿಳಿಸಲಾಗಿದೆ. ಪಠಾಣದಿಂದ ಮಾಜಿ ಶಾಸಕರಾಗಿದ್ದ ಅವರು ಈ ಬಾರಿ ಅದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅದೇ ರೀತಿ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಮುಖ ಸಚಿವರ ಹೆಸರು ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇಲ್ಲ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.