Site icon Vistara News

BJP Meeting: ಬಿಜೆಪಿ ರಾಷ್ಟ್ರೀಯ ಸಭೆಗೆ ಚಾಲನೆ; 400 ಕ್ಷೇತ್ರಗಳ ಟಾರ್ಗೆಟ್ ಕೊಟ್ಟ ಮೋದಿ

Narendra Modi

BJP National Council Meeting Begins In Delhi: Nadda Hails Narendra Modi's Leadership

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಲು ಬಿಜೆಪಿಯು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿಯೇ, ದೆಹಲಿಯಲ್ಲಿ ಶನಿವಾರ (ಫೆಬ್ರವರಿ 17) ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶ (BJP National Council Meeting) ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಸೇರಿ ಹಲವರು ಚಾಲನೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ದಿಸೆಯಲ್ಲಿ ರಣತಂತ್ರ ರೂಪಿಸಲು ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ನಾಯಕರು ಸೇರಿ ದೇಶದ ಮೂಲೆ ಮೂಲೆಗಳಿಂದ ಬಿಜೆಪಿಯ ಸುಮಾರು 11,500 ಮುಖಂಡರು, ಕಾರ್ಯಕರ್ತರು ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳುತ್ತದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿ ನೀಡಿದ್ದಾರೆ. ಇದಕ್ಕಾಗಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಅಣಿಗೊಳಿಸಬೇಕಿದೆ. ಹಾಗಾಗಿ, ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಭಾನುವಾರ (ಫೆಬ್ರವರಿ 18) ಸಭೆ ಮುಗಿಯಲಿದ್ದು, ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಇನ್ನು ಮೋದಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಮೋದಿ ನಾಯಕತ್ವ ಹೊಗಳಿದ ಜೆ.ಪಿ. ನಡ್ಡಾ

ಮೊದಲ ದಿನದ ಸಭೆಯ ವೇಳೆ ಜೆ.ಪಿ. ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೊಗಳಿದರು. “ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಮೈಲುಗಲ್ಲು ಸ್ಥಾಪಿಸುತ್ತಿದೆ. ಮೋದಿ ಆಡಳಿತದ ಅವಧಿಯಲ್ಲಿ ದೇಶದ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ. ಅಯೋಧ್ಯೆಯ ರಾಮಮಂದಿರದ ಕನಸು ಈಗ ನನಸಾಗಿದೆ. ದೇಶವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ಹೇಳಿದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಪ್ರಲ್ಹಾದ್‌ ಜೋಶಿ ಸೇರಿ ಹಲವು ನಾಯಕರು ಹಾಜರಿದ್ದರು.

ಇದನ್ನೂ ಓದಿ: Kamal Nath: ದೆಹಲಿಗೆ ಆಗಮಿಸಿದ ಕಮಲ್‌ನಾಥ್;‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ?

ರಾಜ್ಯದ ನಾಯಕರಿಗೂ ಆಹ್ವಾನ

ರಾಜ್ಯದ ಸುಮಾರು 535 ನಾಯಕರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದ್ದು, ಮಾಜಿ ಸಿಎಂ ಆಗಿ ಯಡಿಯೂರಪ್ಪ, ಸಂಸದರಾಗಿ ರಾಘವೇಂದ್ರ, ಶಾಸಕ ಹಾಗೂ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಭಾಗಿಯಾಗಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಕುಟುಂಬದ ಮೂವರು ಸದಸ್ಯರು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದಾರೆ. ಹೈಕಮಾಂಡ್ ರಾಜ್ಯದ ನಾಯಕರಿಗೆ ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಗೆಲುವಿನ ಟಾಸ್ಕ್ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version