ಹೈದರಾಬಾದ್: ತೆಲಂಗಾಣದಲ್ಲಿ ಇಂದಿನಿಂದ ಎರಡು ದಿನಗಳ (ಜುಲೈ 2 ಮತ್ತು 3) ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ಇಡೀ ನಗರವೀಗ ಕೇಸರಿಮಯವಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿ ಬಿಜೆಪಿಯ ದಿಗ್ಗಜರ ದೊಡ್ಡದೊಡ್ಡ ಬ್ಯಾನರ್‌ಗಳು, ಪೋಸ್ಟರ್‌ಗಳು ರಾರಾಜಿಸುತ್ತಿವೆ. ಹೈದರಾಬಾದ್‌ನ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್ (HICC)ನಲ್ಲಿ ಕಾರ್ಯಕಾರಿಣಿ ನಡೆಯಲಿದ್ದು, ಈ ಕನ್ವೆನ್ಷನ್ ಸೆಂಟರ್‌ನ ಸುತ್ತಮುತ್ತಲೂ ಕೇಸರಿ ಬಣ್ಣ ತುಂಬಿ ತುಳುಕುತ್ತಿದೆ. ಬಿಜೆಪಿಯ ಬಾವುಟಗಳು ಹಾರಾಡುತ್ತಿವೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕರ್ನಾಟಕ ಬಿಟ್ಟರೆ ದಕ್ಷಿಣ ಭಾಗದ ಇನ್ಯಾವುದೇ ರಾಜ್ಯಗಳಲ್ಲೂ ಬಿಜೆಪಿಗೆ ಬಲವಿಲ್ಲ. ತೆಲಂಗಾಣದಲ್ಲೂ ಸಹ ಬಿಜೆಪಿ ದುರ್ಬಲ ಎಂದೇ ಹೇಳಬಹುದು. ಈ ರಾಜ್ಯದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬರುವ ವರ್ಷದ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ ತೆಲಂಗಾಣದಲ್ಲಿ ಆಡಳಿತರೂಢ ಟಿಆರ್‌ಎಸ್ ಪಕ್ಷವನ್ನು ಹಣಿಯಲು ಈ ಕಾರ್ಯಕಾರಿಣಿಯ ಬುನಾದಿ ಹಾಕಿದೆ.
ಸಾಂಸ್ಕೃತಿಕ ಉತ್ಸವ !
ಈ ಎರಡು ದಿನಗಳ ಕಾರ್ಯಕಾರಿಣಿಯನ್ನು ಥೇಟ್ ಸಾಂಸ್ಕೃತಿಕ ಉತ್ಸವದಂತೆ ನಡೆಸಲು ಬಿಜೆಪಿಯ ತೆಲಂಗಾಣ ರಾಜ್ಯ ಘಟಕ ಸಜ್ಜಾಗಿದೆ. ದೇಶದ ಎಲ್ಲ ರಾಜ್ಯಗಳಿಂದ ಪಕ್ಷದ ಗಣ್ಯರು ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ತೆಲಂಗಾಣದ ಸಂಪ್ರದಾಯ, ಪರಂಪರೆ, ಸಂಸ್ಕೃತಿ, ಕಲಾ ಪ್ರದರ್ಶನವಾಗಲಿದೆ. ಇಲ್ಲಿನ ವಿಶೇಷ ಸಾಂಪ್ರದಾಯಿಕ ಊಟ-ತಿನಿಸುಗಳ ತಯಾರಿಯೇ ಆಗಲಿದೆ. ಅಷ್ಟೇ ಅಲ್ಲ, ತೆಲಂಗಾಣದ ಪುರಾತನ ನೃತ್ಯ ಪ್ರಕಾರವಾದ ಪೇರಿಣಿ ಶಿವ ತಾಂಡವಂ ಪ್ರದರ್ಶನಗೊಳ್ಳಲಿದೆ. ಅದರೊಂದಿಗೆ ಭರತನಾಟ್ಯ, ಕುಚಿಪುಡಿ ನೃತ್ಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹೈದರಾಬಾದ್‌ನಲ್ಲಿ ಜುಲೈ 2-3ಕ್ಕೆ
ವಾರಾಂಗಲ್ ಜಿಲ್ಲೆಯಲ್ಲಿರುವ ಐತಿಹಾಸಿಕ, ಪ್ರಾಚೀನ ಕಮಾನು ಆಗಿರುವ, ʼಕಾಕತೀಯ ಕಲಾ ತೋರಣಂʼ ದ ಒಂದು ಮಾದರಿಯನ್ನು ಬಿಜೆಪಿ ಕಾರ್ಯಕಾರಿಣಿ ನಡೆಯಲಿರುವ ಎಚ್‌ಐಸಿಸಿಯಲ್ಲಿ ಅಳವಡಿಸಲಾಗಿದೆ. ಈ ಕಾಕತೀಯ ತೋರಣಂ ಅಥವಾ ವಾರಂಗಲ್ ಗೇಟ್ ಎಂಬುದು 12ನೇ ಶತಮಾನದಲ್ಲಿ ಕಾಕತೀಯರ ರಾಜವಂಶದ ಆಳ್ವಿಕೆಯಿದ್ದಾಗ ನಿರ್ಮಾಣವಾದ ಕಮಾನು. ತೆಲಂಗಾಣ ರಾಜ್ಯದ ಲಾಂಛನದಲ್ಲೂ ಇದರ ಮಾದರಿಯನ್ನು ಅಳವಡಿಸಲಾಗಿದೆ. ಈ ತೋರಣವೀಗ ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾರಾಜಿಸಲಿದೆ. ಒಟ್ಟಾರೆ ಇಡೀ ಹೈದರಾಬಾದ್‌ನ ಸಂಸ್ಕೃತಿ ಕಾರ್ಯಕಾರಣಿಯಲ್ಲಿ ವಿಜೃಂಭಿಸಲಿದೆ. ಸಾಂಸ್ಕೃತಿಕ ರಾಜಕಾರಣ ಎಂಬುದು ಬಿಜೆಪಿಯ ಮೂಲ ನೆಲೆಗಟ್ಟು. ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಸ್ತಿತ್ವಕ್ಕೆ ತರಲಾಗಿದೆ. ಅದೇ ಮಾದರಿಯನ್ನೀಗ ತೆಲಂಗಾಣದಲ್ಲೂ ಜಾರಿಗೆ ತಂದು, ಈ ಮೂಲಕ ಜನರ ಮನಸಿಗೆ ಹತ್ತಿರವಾಗುವ ಪ್ರಯತ್ನ ಇದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ 2-3ರಂದು ಹೈದರಾಬಾದ್‌ನಲ್ಲಿ ಇರಲಿದ್ದಾರೆ. ಕಾರ್ಯಕಾರಿಣಿಯ ಪ್ರತಿ ಸೆಷನ್‌ಗಳಲ್ಲೂ ತೆಲಂಗಾಣ ಸಂಸ್ಕೃತಿ ಪ್ರತಿಬಿಂಬಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ತೆಲಂಗಾಣದ ಉಸ್ತುವಾರಿ ತರುಣ್ ಚುಗ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಹಲವು ಬಿಜೆಪಿ ನಾಯಕರು ಶುಕ್ರವಾರ ಸಂಜೆಯೇ ಹೈದರಾಬಾದ್‌ಗೆ ತಲುಪಿದ್ದಾರೆ. ಏರ್‌ಪೋರ್ಟ್‌ನಿಂದ ಹೈದರಾಬಾದ್‌ನ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ವರೆಗೆ ಜೆಪಿ ನಡ್ಡಾ ಶುಕ್ರವಾರ ಬಹುದೊಡ್ಡಮಟ್ಟದ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜುಲೈ 3ರಂದು ಇಲ್ಲಿ ಜಾಥಾ ನಡೆಸಲಿದ್ದಾರೆ.
ಇದನ್ನೂ ಓದಿ: ದಕ್ಷಿಣ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು, ನಾಳೆಯಿಂದ ಹೈದರಾಬಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ