ಹೈದರಾಬಾದ್: ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹೈದರಾಬಾದ್‌ನಲ್ಲಿ ಜುಲೈ 2-3ಕ್ಕೆ ನಡೆಯಲಿದೆ.
ಪಕ್ಷದ ನಾನಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ ಇದೆ.
ತೆಲಂಗಾಣದಲ್ಲಿ ಬಿಜೆಪಿ ಟಿಆರ್‌ಎಸ್‌ಗೆ ಪ್ರಮುಖ ಎದುರಾಳಿಯಾಗಿದ್ದು, ಪಕ್ಷದ ಬಲವರ್ಧನೆಗೆ ಕಾರ್ಯಕಾರಿಣಿ ಸಹಕಾರಿಯಾಗುವ ನಿರೀಕ್ಷೆ ಇದೆ. ಕೋವಿಡ್ ಇಳಿಮುಖವಾದ ಬಳಿಕ ದಿಲ್ಲಿಯ ಹೊರಗೆ ಬಿಜೆಪಿಯ ಮೊದಲ ಪೂರ್ಣ ಪ್ರಮಾಣದ ಕಾರ್ಯಕಾರಿಣಿ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ನಿರ್ಣಾಯಕ ಚುನಾವಣೆಗೆ ಮುನ್ನ ಕಾರ್ಯಕಾರಿಣಿ ಏರ್ಪಟ್ಟಿದೆ. ಡಿಸೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಡಲಿದೆ.
ಬಿಜೆಪಿಯ ಹಾಲಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಈಗಿನ ಅವಧಿಯಲ್ಲಿ ಕೊನೆಯ ಕಾರ್ಯಕಾರಿಣಿ ಇದಾಗಿದೆ. 2023ರ ಜನವರಿಯಲ್ಲಿ ಇವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಕಾರ್ಯಕಾರಿಣಿಯ ದಿನಂಕದ ಬಗ್ಗೆ ಅಧಿಕೃತ ಘೋಷಣೆ ನಿರಿಕ್ಷಿಸಲಾಗಿದೆ. ಹಲವು ಮಹತ್ವದ ನಿರ್ಧಾರಗಳನ್ನು ಕಾರ್ಯಕಾರಿಣಿ ಕೈಗೊಳ್ಳುವ ಸಾಧ್ಯತೆ ಇದೆ.