ನವದೆಹಲಿ: ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರಾಟೆಯ ಮಧ್ಯೆ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿಯು (BJP) ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ವಯನಾಡಿನಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಶತಾಯ ಗತಾಯ ಸೋಲಿಸಲು ರಣತಂತ್ರ ರೂಪಿಸಿದೆ. ಇದೇ ಕಾರಣಕ್ಕಾಗಿ ವಯನಾಡಿನಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ (K Surendran) ಅವರನ್ನು ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ.
ಇದರಿಂದಾಗಿ ವಯನಾಡು ಲೋಕಸಭೆ ಕ್ಷೇತ್ರದ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಇದುವರೆಗೆ 398 ಅಭ್ಯರ್ಥಿಗಳನ್ನು ಘೋಷಿಸಿದೆ. ಆಲತ್ತೂರ್ ಕ್ಷೇತ್ರದಲ್ಲಿ ಟಿ.ಎನ್.ಸರಸು, ಎರ್ನಾಕುಲಂನಲ್ಲಿ ಕೆ.ಎಸ್.ರಾಧಾಕೃಷ್ಣನ್ ಹಾಗೂ ಕೊಲ್ಲಂನಲ್ಲಿ ಜಿ. ಕೃಷ್ಣಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕೇರಳದ 20 ಲೋಕಸಭೆ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು, ವಯನಾಡಿನಲ್ಲಿ ರಾಹುಲ್ ಗಾಂಧಿ ಅವರಿಗೆ ಸಡ್ಡು ಹೊಡೆಯಲು ಸಜ್ಜಾಗಿರುವ ಕೆ. ಸುರೇಂದ್ರನ್ ಯಾರು? ಅವರ ಹಿನ್ನೆಲೆ ಏನು ಎಂಬುದರ ಮಾಹಿತಿ ಇಲ್ಲಿದೆ.
#WATCH | Kerala: On his candidature from Wayanad, Kerala BJP president K Surendran says, " I want to thank PM Modi, Union Home Minister Amit Shah, party chief JP Nadda and party National General Secretary B L Santhosh…I will be contesting against Rahul Gandhi's negative… pic.twitter.com/2QtZFmYkkX
— ANI (@ANI) March 25, 2024
ಯಾರಿವರು ಕೆ. ಸುರೇಂದ್ರನ್?
ಕೇರಳದ ಕಲ್ಲಿಕೋಟೆ ಜಿಲ್ಲೆಯ ಉಳ್ಳೆಯೇರಿಯವರಾದ ಕೆ. ಸುರೇಂದ್ರನ್ ಅವರು 2020ರಿಂದಲೂ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ. ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶದ ಕುರಿತ ಪ್ರಕರಣದಲ್ಲಿ ರಾಜ್ಯಾದ್ಯಂತ ನಡೆದ ಪ್ರತಿಭಟನೆಗೆ ಇವರ ಪಾತ್ರ ಹೆಚ್ಚಿದೆ. ವಯನಾಡು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪಕ್ಷ ಸೇರ್ಪಡೆಯಾದ ಇವರು ಸಂಘಟನಾ ಚತುರ ಎಂದೇ ಖ್ಯಾತಿಯಾಗಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಪಥಣಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಇವರು ಇದೇ ವರ್ಷ ನಡೆದ ಕೊಣ್ಣಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಿದರು. ವಯನಾಡಿನಲ್ಲಿ ಪಕ್ಷ ಸಂಘಟನೆ ಮಾಡಿದ ಅನುಭವ ಇರುವ ಕೆ. ಸುರೇಂದ್ರನ್ ಅವರಿಗೀಗ ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ. ಇವರು ಚುನಾವಣೆಯಲ್ಲಿ ಹೇಗೆ ಸ್ಪರ್ಧೆಯೊಡ್ಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?
ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರದ ಸಂತ್ರಸ್ತೆ ರೇಖಾ ಪಾತ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ರಾಜಕೀಯ ರಣತಂತ್ರ ರೂಪಿಸಿದೆ. ರೇಖಾ ಪಾತ್ರಾ ಅವರನ್ನು ಬಿಜೆಪಿಯು ಬಸಿರ್‌ಹಾತ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇಲ್ಲೀಗ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.
ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕ (ಈಗ ಉಚ್ಚಾಟಿತ ನಾಯಕ) ಶಹಜಹಾನ್ ಶೇಖ್ ಹಾಗೂ ಆತನ ಆಪ್ತರು ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅವರ ಭೂಮಿ ಅತಿಕ್ರಮಣ ಸೇರಿ ಹಲವು ರೀತಿಯ ದೌರ್ಜನ್ಯ ಎಸಗಿದ್ದಾರೆ. ಇಂತಹ ದೌರ್ಜನ್ಯಕ್ಕೆ ರೇಖಾ ಪಾತ್ರಾ ಅವರು ಕೂಡ ಬಲಿಯಾಗಿದ್ದು, ರಾಜಕೀಯ ಹಿಂಸಾಚಾರದ ಸಂತ್ರಸ್ತೆಯಾಗಿದ್ದಾರೆ. ಇವರು ಶಹಜಹಾನ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿದ ಮೊದಲ ಸಂತ್ರಸ್ತೆಯಾಗಿದ್ದಾರೆ. ಟಿಎಂಸಿ ವಿರುದ್ಧ ಹೋರಾಟ ತೀವ್ರಗೊಳ್ಳಲು ಇವರು ಕೂಡ ಕಾರಣರಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ