ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯು (BJP March) ಹಿಂಸಾಚಾರಕ್ಕೆ ತಿರುಗಿದೆ. ರಾಜ್ಯ ಸರ್ಕಾರದ ಸಚಿವಾಲಯ “ನಬನ್ನ”ವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಪೊಲೀಸರು ಗುಂಪನ್ನು ಚದುರಿಸಲು ಜಲಫಿರಂಗಿ ಬಳಸಿದ್ದು, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ಸಂಸದ ಲಾಕೆಟ್ ಚಟರ್ಜಿ ಸೇರಿ ಬಿಜೆಪಿಯ ಹಲವು ನಾಯಕರನ್ನು ಬಂಧಿಸಲಾಗಿದೆ.
ಸಚಿವಾಲಯದತ್ತ ಪ್ರತಿಭಟನಾ ಮೆರವಣಿಗೆ ಸಾಗುವಾಗ ಸೆಕೆಂಡ್ ಹೂಗ್ಲಿ ಬ್ರಿಡ್ಜ್ ಬಳಿ ಪೊಲೀಸರು ಬಿಜೆಪಿ ನಾಯಕರನ್ನು ತಡೆದಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರು ತಡೆದ ಕಾರಣ ಕೆರಳಿದ ಕಾರ್ಯಕರ್ತರು ಅಲ್ಲಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗುತ್ತಲೇ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಬಳಸಿದ್ದಾರೆ.
ಗಲಾಟೆ ನಡೆಯುವ ವೇಳೆ ಪೊಲೀಸರ ವಾಹನವೊಂದಕ್ಕೂ ಬೆಂಕಿ ಹಚ್ಚಲಾಗಿದೆ. ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಕಾರಣ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. “ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮಮತಾ ಬ್ಯಾನರ್ಜಿ ಅವರನ್ನು ಕಂಡರೆ ಜನರಿಗೆ ಆಗುತ್ತಿಲ್ಲ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ” ಎಂದು ಸುವೇಂದು ಅಧಿಕಾರಿ ಆರೋಪಿಸಿದರು.
ಇದನ್ನೂ ಓದಿ | ಪಶ್ಚಿಮ ಬಂಗಾಳ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರು; ತಡೆದ ಪೊಲೀಸರ ಜತೆ ಸಂಘರ್ಷ