ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ಕಚೇರಿ ಹಾಗೂ ಕಾರ್ಖಾನೆಗಳಲ್ಲಿ ಆದಾಯ ತೆರಿಗೆ ಇಲಾಖೆ (Income Tax Raid) ದಾಳಿ ನಡೆಸಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳನ್ನು ಆಧರಿಸಿ ಬಿಜೆಪಿ ಮುಖಂಡರು ಭಾನುವಾರ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಂಗ್ರೆಸ್ನ ಭ್ರಷ್ಟರ ಕೈಗೆ ಕಾನೂನಿಗೆ ಕುಣಿಗೆ ಬೀಳಲಿದೆ, ಅವರೆಲ್ಲರೂ ಅದಕ್ಕೆ ಹೊಣೆಯಾಗಲಿದ್ದಾರೆ ಎಂಬುದಾಗಿ ಬಿಜೆಪಿ ಹೇಳಿದೆ.
ಒಡಿಶಾದ ಬಾಲಂಗೀರ್ನಲ್ಲಿರುವ ಸಾಹು ಅವರ ಸಹೋದರನ ಒಡೆತನದ ಡಿಸ್ಟಿಲರಿ ಕಂಪನಿಯ ಆವರಣದಿಂದ ಆದಾಯ ತೆರಿಗೆ ಇಲಾಖೆ 300 ಕೋಟಿ ರೂ.ಗಿಂತ ಹೆಚ್ಚು ನಗದು ವಶಪಡಿಸಿಕೊಂಡಿದೆ. ನಿರಂತರವಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಬಗೆದಷ್ಟು ನೋಟಿನ ಕಂತೆಗಳು ಸಿಗುತ್ತಿವೆ. ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಬೆಳಿಗ್ಗೆ ಹೊಸ ಎಣಿಕೆ ಯಂತ್ರಗಳನ್ನು ತಂದು ದುಡ್ಡನ್ನು ಎಣಿಸಲು ಆರಂಭಿಸಿದ್ದಾರೆ.
बंधु जवाब तो देना पड़ेगा, तुमको भी और तुम्हारे नेता राहुल गांधी को भी। ये नया भारत है, यहाँ पर राजपरिवार के नाम पर जनता का शोषण नहीं करने दिया जाएगा।भागते भागते थक जाओगे, लेकिन क़ानून पीछा नहीं छोड़ेगा।
— Jagat Prakash Nadda (@JPNadda) December 10, 2023
अगर कांग्रेस भ्रष्टाचार की गारंटी है तो मोदी जी भ्रष्टाचार पर कार्यवाही की… pic.twitter.com/4WtnUoXs88
ಸಹೋದರ, ನೀವು ಮತ್ತು ನಿಮ್ಮ ನಾಯಕ ರಾಹುಲ್ ಗಾಂಧಿ ಇದಕ್ಕೆಲ್ಲ ಉತ್ತರಿಸಬೇಕು. ಇದು ನವ ಭಾರತ. ವಂಶಪಾರಂಪರ್ಯದ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆ ಮಾಡಲು ಇಲ್ಲಿ ಕಿಂಚಿತ್ತೂ ಅವಕಾಶವಿಲ್ಲ. ನೀವು ತಪ್ಪಿಸಿಕೊಳ್ಳಲು ಓಡಿ ಓಡಿ ಸುಸ್ತಾಗುತ್ತೀರಿ. ಕಾನೂನು ನಿಮ್ಮನ್ನು ಬೆನ್ನಟ್ಟದೆ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಖಾತರಿ ಕೊಟ್ಟರೆ, ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಕ್ರಮದ ಖಾತರಿ ನೀಡುತ್ತಾರೆ. ಸಾರ್ವಜನಿಕರ ಹಣವನ್ನು ನೀವು ಹಿಂದಿರುಗಿಸಬೇಕಾಗುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಐಟಿ ರೇಡ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಮೌನವನ್ನು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. “ಧೀರಜ್ ಸಾಹು ವಿರುದ್ಧದ ಐಟಿ ಶೋಧದ ಬಗ್ಗೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನೀವು ಸದಾ ಆದಾಯ ತೆರಿಗೆ ಇಲಾಖೆಯನ್ನು ಟೀಕಿಸುತ್ತೀರುತ್ತೀರಿ. ಆದರೆ ಈಗ ಏಕೆ ಸುಮ್ಮನಿದ್ದೀರಿ ಎಂದು ಕೇಳಿದ್ದಾರೆ.
ಬೌಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಆವರಣದಿಂದ ಆದಾಯ ತೆರಿಗೆ ಇಲಾಖೆ 300 ಕೋಟಿ ರೂ.ಗಿಂತ ಹೆಚ್ಚು ನಗದು ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳಲಾದ ಒಟ್ಟು ಮೊತ್ತವು 350 ಕೋಟಿ ರೂಪಾಯಿಯನ್ನು ಮೀರುತ್ತದೆ ಎಂದು ಅದು ನಿರೀಕ್ಷಿಸಲಾಗಿದೆ. ಸಾಹು ಕುಟುಂಬವು ದೇಶೀಯ ಮದ್ಯವನ್ನು ತಯಾರಿಸುವ ಡಿಸ್ಟಿಲರಿ ಕಂಪನಿಯನ್ನು ಹೊಂದಿದೆ. ಇಲಾಖೆಯು ಮಾಲೀಕ ಮತ್ತು ಅವರೊಂದಿಗೆ ನಂಟು ಹೊಂದಿರುವ ಜನರ ಮನೆಗಳನ್ನು ಶೋಧಿಸಿದೆ.
ಒಂದೇ ಕಡೆ 250 ಕೋಟಿ ರೂಪಾಯಿ ನಗದು
ಧೀರಜ್ ಸಾಹು ಜಾರ್ಖಂಡ್ ನ ರಾಜ್ಯಸಭಾ ಸದಸ್ಯರಾಗಿದ್ದಾರೆ. ಲೆಕ್ಕವಿಲ್ಲದೇ ಸಾವಿರಾರು ಕೋಟಿ ರೂಪಾಯಿಯ ಮದ್ಯವನ್ನು ಉತ್ಪಾದಿಸಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಬೋಲಾಂಗೀರ್ನಲ್ಲಿರುವ ಕಂಪನಿಯ ಕಚೇರಿ ಒಂದರಲ್ಲೇ 250 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು.
ಇದನ್ನೂ ಓದಿ : Bhagwant Mann : ಅಪ್ಪ ಮಹಾನ್ ಕುಡುಕ, ಲಂಪಟ; ಪಂಜಾಬ್ ಸಿಎಂ ಮಾನ್ ಮಾನ ತೆಗೆದ ಪುತ್ರಿ
ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಸಂಸದ ಚಿರಾಗ್ ಪಾಸ್ವಾನ್ ಅವರು ಹಣ ಪತ್ತೆಯಾಗಿರುವ ಬಗ್ಗೆ ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸಿದ್ದಾರೆ. ಇದು ವಿರೋಧ ಪಕ್ಷದ ನಾಯಕರ ಹಳೆಯ ಸಂಪ್ರದಾಯವಾಗಿದೆ, ಮೊದಲು ಅವರು ಭ್ರಷ್ಟಾಚಾರ ಮಾಡುತ್ತಾರೆ. ಸಿಕ್ಕಿಬಿದ್ದ ನಂತರ ಸಂಬಂಧವೇ ಇಲ್ಲ ಎನ್ನುತ್ತಾರೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಯಾರು ಭಾಗಿಯಾಗಿಲ್ಲ ಎಂಬುದನ್ನು ತನಿಖೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇದು ಯಾರ ಹಣ ಎಂದು ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಬಿಜೆಪಿ ಮುಖಂಡ ಎಲ್.ಕೆ. ಬಾಜಪೇಯಿ ಅವರು ಪ್ರಶ್ನಿಸಿದ್ದಾರೆ. “ಸಿಬಿಐ ಮತ್ತು ಇಡಿ ವಿರುದ್ಧ ನಿಯಮಿತವಾಗಿ ಮಾತನಾಡುತ್ತಿದ್ದ ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಇಂಡಿಯಾ ಮೈತ್ರಿಕೂಟವನ್ನು ರಚಿಸಿದ್ದರು. ಇದು ಅವರ ಕೃತ್ಯಗಳಿಗೆ ಕನ್ನಡಿ ಹಿಡಿದಿದೆ. ಅದು ಯಾರ ಹಣ ಎಂದು ರಾಹುಲ್ ಗಾಂಧಿ ಉತ್ತರಿಸಬೇಕು” ಎಂದು ಅವರು ಹೇಳಿದ್ದಾರೆ.