ನವ ದೆಹಲಿ: ‘ಗಡಿಯಲ್ಲಿ ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ. ನಮ್ಮ ದೇಶದ ಯೋಧರು ಆ ದೇಶದ ಸೈನಿಕರಿಂದ ಪೆಟ್ಟು ತಿನ್ನುತ್ತಿದ್ದಾರೆ. ಇಷ್ಟೆಲ್ಲ ಆದರೂ ಕೇಂದ್ರ ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿಯೇ ಇದೆ’ ಎಂದು ಹೇಳಿಕೆ ನೀಡುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ‘ಸೇನೆಗೇ ಅವಮಾನ ಮಾಡಿದ ರಾಹುಲ್ ಗಾಂಧಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದಿಂದ ಕೂಡಲೇ ಉಚ್ಚಾಟಿಸಿಬೇಕು. ಇಲ್ಲದೆ ಇದ್ದರೆ, ಖರ್ಗೆ ಒಬ್ಬ ರಿಮೋಟ್ ಕಂಟ್ರೋಲ್ ನಾಯಕ ಎಂದೇ ನಾವು ಪರಿಗಣಿಸುತ್ತೇವೆ’ ಎಂದು ಹೇಳಿದ್ದಾರೆ.
‘ರಾಹುಲ್ ಗಾಂಧಿಯವರು ಭಾರತೀಯ ಸೇನೆಯನ್ನು ಅವಮಾನಿಸುವ ಹೇಳಿಕೆಯನ್ನು ನಿರಂತರವಾಗಿ ಕೊಡುತ್ತಲೇ ಬಂದಿದ್ದಾರೆ. ನಾನು 1963ರ ಸಂದರ್ಭದ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಅದೇ ವರ್ಷದಲ್ಲಿ ಗಡಿಭಾಗದಲ್ಲಿರುವ ಭಾರತದ 3,80,000 ಚದರ್ ಅಡಿ ಕಿಲೋಮೀಟರ್ಗಳಷ್ಟು ಉದ್ದದ ಭೂಮಿಯನ್ನು ಚೀನಾ ಅತಿಕ್ರಮಿಸಿಕೊಂಡಿದ್ದಾಗಿ ಆ ಸಮಯದ ಸಂಸತ್ತಿನ ನಡಾವಳಿಗಳು ಸೂಚಿಸುತ್ತವೆ. ಆಗ ಕಾಂಗ್ರೆಸ್ ಆಡಳಿತವೇ ಇತ್ತು. ಚೀನಾ ನಮ್ಮ ಭೂಭಾಗ ಅತಿಕ್ರಮಿಸಿಕೊಂಡಿದ್ದರೂ ಕಾಂಗ್ರೆಸ್ ಮೌನವಹಿಸಿತ್ತು. ಕಾಂಗ್ರೆಸ್ ಪಕ್ಷ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಈ ಮೌನಕ್ಕೆ ಕಾರಣ ಎಂದು ಗೌರವ್ ಭಾಟಿಯಾ ಆರೋಪಿಸಿದ್ದಾರೆ.
‘ಆಗ ಭಾರತದ ಭೂಭಾಗವನ್ನು ಚೀನಾ ಆಕ್ರಮಣ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ಎಂದಿಗೂ ಖಂಡಿಸಲಿಲ್ಲ. ತಾನು ಅದನ್ನು ವಿರೋಧಿಸಲಿಲ್ಲ ಎಂಬ ಸಣ್ಣ ಪಶ್ಚಾತ್ತಾಪವೂ ಆ ಪಕ್ಷಕ್ಕೆ ಇಲ್ಲ. ಯಾರು ದೇಶದ್ರೋಹಿಗಳು ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಚೀನಾ ನಮ್ಮ ಭೂಭಾಗ ಅತಿಕ್ರಮಣ ಮಾಡಿಕೊಂಡರೂ ಕಾಂಗ್ರೆಸ್ ಯಾಕೆ ಸುಮ್ಮನಿತ್ತು? ಚೀನಾದೊಂದಿಗೆ ಕಾಂಗ್ರೆಸ್ ಮಾಡಿಕೊಂಡಿದ್ದ ವಾಸ್ತವ ಒಪ್ಪಂದ ಏನು? ಎಂಬಿತ್ಯಾದಿ ಬಗ್ಗೆ ಕಾಂಗ್ರೆಸ್ ಯಾವತ್ತೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಎಲ್ಲವನ್ನೂ ಕದ್ದುಮುಚ್ಚಿಯೇ ಮಾಡಿತು’ ಎಂದು ಹರಿಹಾಯ್ದಿದ್ದಾರೆ.
ಗಡಿ ಭಾಗದಲ್ಲಿ ಯಾವುದೇ ದೇಶ ನಮ್ಮೊಂದಿಗೆ ಸಂಘರ್ಷಕ್ಕೆ ನಿಂತಾಗಲೂ, ನಮ್ಮ ಸೈನಿಕರ ಮೇಲೆ ದಾಳಿ ಮಾಡಿದಾಗಲೂ ಇಲ್ಲಿ ದೇಶದೊಳಗೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಮ್ಮ ದೇಶದ ವಿರುದ್ಧವೇ ಮಾತನಾಡುತ್ತಾರೆ. ಇದು ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದು ಹೇಳಿದ ಭಾಟಿಯಾ ‘ರಾಹುಲ್ ಗಾಂಧಿ ಏನು ಗೊತ್ತಿದೆ ಎಂದು ಮಾತನಾಡುತ್ತಾರೆ? ಅವರನ್ನು ಈ ದೇಶ ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ರಾಹುಲ್ ಗಾಂಧಿ ಎಸಿ ರೂಮಿನಲ್ಲಿ ತಣ್ಣಗೆ ಮಲಗಿದ್ದಾಗ, ಇತ್ತ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರು ಸೈನಿಕರಿದ್ದಲ್ಲಿಗೇ ಹೋಗಿ, ಅವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ: Rahul Gandhi On Army | ನಮ್ಮ ಸೈನಿಕರಿಗೆ ಪೆಟ್ಟು ಬೀಳುತ್ತಿವೆ, ದೇಶದ ಯೋಧರಿಗೆ ರಾಹುಲ್ ಗಾಂಧಿ ಅವಮಾನ