Site icon Vistara News

Gujarat Election | ಹಾರ್ದಿಕ್ ಪಟೇಲ್, ಕ್ರಿಕೆಟರ್ ಜಡೇಜಾ ಪತ್ನಿಗೆ ಟಿಕೆಟ್, ಬಿಜೆಪಿ ಅಭ್ಯರ್ಥಿಗಳ ಫಸ್ಟ್ ಲಿಸ್ಟ್!

Gujarat election

ನವದೆಹಲಿ: ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆಗೆ ಎರಡು ಹಂತದ ಚುನಾವಣೆ (Gujarat Election) ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ 84 ಅಭ್ಯರ್ಥಿಗಳನ್ನು ಹೆಸರಿಸಿದೆ. ಡಿ.5ರ ಎರಡನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯಲಿದ್ದು, ಈ ಪೈಕಿ 76 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಒಟ್ಟಾರೆ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕ್ರಿಕೆಟರ್ ರವೀಂದ್ರ ಜಡೇಜಾ ಅವರ ಪತ್ನಿಗೂ ಬಿಜೆಪಿ ಟಿಕೆಟ್ ನೀಡಿದ್ದು ಅವರು ಜಾಮನಗರ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಹಾರ್ದಿಕ್ ಪಟೇಲ್ ಅವರಿಗೂ ಟಿಕೆಟ್ ನೀಡಲಾಗಿದೆ. ವೀರಾಮಗಂ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮೊದಲ ಪಟ್ಟಿಯಲ್ಲಿ ಬಿಜೆಪಿ 14 ಮಹಿಳೆ, 13 ಪರಿಶಿಷ್ಟ ಜಾತಿ ಮತ್ತು 24 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಜತೆಗೆ, 38 ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಾಗಿಲ್ಲ. ವೀರೇಂದ್ರ ಸಿಂಗ್ ಬದದ್ದೂರ್ ಅವರನ್ನು ರಾಪಾರ್ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಜಡೇಜಾ ಪತ್ನಿಗೆ ಟಿಕೆಟ್
ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕ್ರಿಕೆಟರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ಈ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಮೊದಲ ಹಂತದಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಗೆಯೇ ಗುಜರಾತ್‌ನ ಹಾಲಿ ಗೃಹ ಸಚಿವ ಹರ್ಷ್ ಸಿಂಘ್ವಿ ಅವರು ಮಜುರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ವಿಜಯ ರೂಪಾನಿ ಸ್ಪರ್ಧೆ ಇಲ್ಲ
ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ, ಆಗ ಹೊಸಬರಿಗೆ ಅವಕಾಶ ನೀಡುವುದು, ಅದರಲ್ಲೂ ಯುವಕರಿಗೆ ಮನ್ನಣೆ ನೀಡುವುದನ್ನು ಬಿಜೆಪಿ ರೂಢಿಸಿಕೊಂಡಿದೆ. ಅದರಲ್ಲೂ, ಗುಜರಾತ್‌ ವಿಧಾನಸಭೆ ಚುನಾವಣೆಯನ್ನು (Gujarat Election) ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಿಜೆಪಿಯು, ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿಯೇ ಈ ಬಾರಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಹಾಗೂ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಸೇರಿ ಹಲವರು ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಹಾಗೆಯೇ, ಬಿಜೆಪಿಯ ಒಟ್ಟು ಶಾಸಕರಲ್ಲಿ ಶೇ.20ರಷ್ಟು ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ

Exit mobile version