Site icon Vistara News

ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ; ಮಹಿಳೆ, ರೈತರಿಗೆ ಬಂಪರ್‌ ಯೋಜನೆ, ಹಗರಣ ತನಿಖೆಗೆ ಎಸ್ಐಟಿ

BJP releases manifesto for Rajasthan assembly polls

ನವದೆಹಲಿ: ರಾಜಸ್ಥಾನದ ವಿಧಾನಸಭೆ ಚುನಾವಣೆಗೆ (Rajasthan Election 2023) ಭಾರತೀಯ ಜನತಾ ಪಾರ್ಟಿಯು (BJP Party) ತನ್ನ ಚುನಾವಣಾ ಪ್ರಣಾಳಿಕೆಯನ್ನು (election manifesto) ಗುರುವಾರ ಬಿಡುಗಡೆ ಮಾಡಿದೆ. ಮಹಿಳಾ ಸಬಲೀಕರಣ, ರೈತರು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದಲ್ಲಿ ನಡೆದ ಪೇಪರ್ ಲೀಕ್ (Paper Leak Scam) ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಭರವಸೆಯನ್ನೂ ನೀಡಲಾಗಿದೆ. ಜೈಪುರದ ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP National President JP Nadda) ಬಿಡುಗಡೆ ಮಾಡಿದರು.

ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ಉಳಿತಾಯ ಬಾಂಡ್‌ಗಳು, ಐದು ವರ್ಷಗಳಲ್ಲಿ 2.5 ಲಕ್ಷ ಸರ್ಕಾರಿ ಉದ್ಯೋಗಗಳು, ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ, ಕ್ವಿಂಟಲ್‌ಗೆ 2,700 ರೂ. ಹೆಚ್ಚಿನ ನೆರವು ಮತ್ತು ಅರಾವಳಿ ಪರ್ವತ ಶ್ರೇಣಿಯ ರಕ್ಷಣೆಯ ಯೋಜನೆಯನ್ನು ಬಿಜೆಪಿ ಕೈಗೊಳ್ಳಲಿದೆ ನೀಡಲಿದೆ ಎಂದು ಜೆಪಿ ನಡ್ಡಾ ಅವರು ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿಪಿ ಜೋಶಿ, ಅರುಣ್ ರಾಮ್ ಮೇಘ್ವಾಲ್, ವಸುಂಧರಾ ರಾಜೆ, ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನಿಯಾ ಸೇರಿದಂತೆ ಇನ್ನಿತರ ನಾಯಕರು ಹಾಜರಿದ್ದರು.

ಉಳಿದ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ಕೇವಲ ಔಪಚಾರಿಕ ಪ್ರಕ್ರಿಯೆಯಷ್ಟೇ. ಬಿಜೆಪಿಗೆ ಚುನಾವಣಾ ಪ್ರಣಾಳಿಕೆ ಅಭಿವೃದ್ಧಿಯ ನೀಲ ನಕ್ಷೆಯಾಗಿದೆ. ನಾವು ಜನರಿಗೆ ನೀಡುತ್ತಿರುವ ಬದ್ಧತೆಯ ವಾಗ್ದಾನವಾಗಿದೆ ಎಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜೆಪಿ ನಡ್ಡಾ ಅವರು ಹೇಳಿದರು.

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಾಯಸ್, ಮಹಿಳೆಯರು, ಬಡವರು, ಹಿಂದುಳಿದವರು, ಎಸ್ಸಿ ಮತ್ತು ಎಸ್ಟಿ ಯುವಕರು ಮತ್ತು ರೈತರ ಸಬಲೀಕರಣ ಮತ್ತು ಮೂಲಸೌಕರ್ಯಗಳ ಬಲವರ್ಧನೆ, ಅಭಿವೃದ್ಧಿ ಮತ್ತು ಮೂಲಭೂತ ತತ್ವಗಳನ್ನು ಪೂರೈಸುವುದು ಪ್ರಣಾಳಿಕೆಯ ಮೂರು ಪ್ರಮುಖ ಕ್ಷೇತ್ರಗಳಾಗಿವೆ ಎಂದು ಅವರು ಹೇಳಿದರು.

ರೈತರಿಗೆ ಗೋಧಿಯ ಕನಿಷ್ಠ ಬೆಂಬಲಯ ಮೇಲೆ ಪ್ರತಿ ಕ್ವಿಂಟಲ್‌ಗೆ 2,700 ರೂ. ಬೋನಸ್ ಮತ್ತು ಕೃಷಿ ಸಾಲವನ್ನು ಪಾವತಿಸುವಲ್ಲಿ ವಿಫಲವಾಗಿ, ಜಮೀನು ಸ್ವಾಧೀನ ಪಡಿಸಿಕೊಂಡ ಬ್ಯಾಂಕುಗಳಿಗೆ ಪರಿಹಾರ ನೀಡುವ ಪ್ರಸ್ತಾಪವನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಹೆಣ್ಣು ಮಕ್ಕಳಿಗಾಗಿ ಲಾಡೋ ಪ್ರೋತ್ಸಾಹ್ ಯೋಜನೆಯನ್ನು ಪರಿಚಯಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದರ ಅಡಿಯಲ್ಲಿ ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮಿ ಯೋಜನೆಯಂತೆಯೇ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂ. ಉಳಿತಾಯ ಬಾಂಡ್ ನೀಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿ ಮಾಡುವುದಕ್ಕಾಗಿ ಬಿಜೆಪಿಯುವ ಸುಮಾರು 6 ಲಕ್ಷ ಮಹಿಳೆಯರಿಗೆ ಲಕಪತಿ ದೀದಿ ಸ್ಕೀಮ್‌ನಲ್ಲಿ ತರಬೇತಿ ಮತ್ತು ಆರ್ಥಿಕ ಬೆಂಬಲ ನೀಡುವುದಾಗಿ ಘೋಷಿಸಿದೆ. ಅಲ್ಲದೇ, ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಮೇಲೆ 450 ರೂ. ಸಬ್ಸಿಡಿ ದೊರೆಯಲಿದೆ. ಹಾಗೆಯೇ, ಮಾತೃ ವಂದನಾ ಯೋಜನೆಯ ಮೊತ್ತವನ್ನು 5000 ರೂ.ನಿಂದ 8000 ರೂ.ವರೆಗೆ ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚಗಳಿಗಾಗಿ ನೇರ ನಗದು ಮೂಲಕ 1200 ರೂ. ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ.

ರಾಜಸ್ಥಾನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ರಾಜಸ್ಥಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅನ್ನು ರಾಜ್ಯದ ಪ್ರತಿ ವಿಭಾಗದಲ್ಲಿ ಆರಂಭಿಸಲಾಗುವುದು. ಏಮ್ಸ್ ಮತ್ತು ಐಐಟಿಗಳ ರೀತಿಯಲ್ಲಿ, ಆರೋಗ್ಯ ಮೂಲಸೌಕರ್ಯವನ್ನು ನವೀಕರಿಸಲು ಮತ್ತು ಸುಧಾರಿಸಲು 40,000 ಕೋಟಿ ರೂ. ವೆಚ್ಚ ಮಾಡಲಾಗುವುದು. 15,000 ವೈದ್ಯರು ಮತ್ತು 20,000 ಅರೆವೈದ್ಯಕೀಯ ಸಿಬ್ಬಂದಿ ನೇಮಕ ಮಾಡುವುದಾಗಿ ಬಿಜೆಪಿ ಹೇಳಿದೆ.

ಈ ಸುದ್ದಿಯನ್ನೂ ಓದಿ: ರಾಜಸ್ಥಾನ ಚುನಾವಣೆ; ಅಶೋಕ್‌ ಗೆಹ್ಲೋಟ್‌ ಪುತ್ರಗೆ ಇ.ಡಿ ಸಮನ್ಸ್;‌ ಕೈ ರಾಜ್ಯಾಧ್ಯಕ್ಷರ ಮನೆಗೆ ದಾಳಿ

Exit mobile version