ನವದೆಹಲಿ: ಈ ವರ್ಷಾಂತ್ಯಕ್ಕೆ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ(MP Assembly Election) ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿಯು (BJP) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (Candidates List) ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಕೇಂದ್ರ ಸಚಿವರು (Union Ministers) ಹಾಗೂ ಹಲವು ಸಂಸದರಿಗೆ (Members of Parliament) ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಚುನಾವಣಾ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಹಾಗಿದ್ದರೂ ಬಿಜೆಪಿಯು, ಕಳೆದ ಆಗಸ್ಟ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ಎಲ್ಲ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿತ್ತು. ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಆಹಾರ ಸಂಸ್ಕರಣೆ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಸೇರಿ ಮೂವರು ಸಚಿವರಿಗೆ ಟಿಕೆಟ್ ನೀಡಿದೆ. ಜತೆಗೆ ಹಲವು ಸಂಸದರಿಗೂ ಸ್ಪರ್ಧಿಸಲು ಸೂಚಿಸಲಾಗಿದೆ. ಸಚಿವ ತೋಮರ್ ಅವರು ದಿಮಾನಿ ಹಾಗೂ ಪಟೇಲ್ ಅವರು ನರಸಿಂಗಪುರ ವಿಧಾನಸಭೆ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.
ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ನಾಯಕರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಂಡಿದ್ದು, ಇದರಿಂದ ಗೆಲ್ಲುವ ಅವಕಾಶ ಪಕ್ಷಕ್ಕೆ ಹೆಚ್ಚಾಗುತ್ತದೆ ಎಂದು ಪಕ್ಷದ ಪದಾಧಿಕಾರಿಗಳು ಭಾವಿಸಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಫಗ್ಗನ್ ಸಿಂಕ್ ಕುಲಸ್ತೆ ಅವರು ನಿವಾಸ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಎಸ್‌ಟಿ ಮೀಸಲು ಕ್ಷೇತ್ರವಾಗಿದೆ.
ಸಂಸದರಾದ ಗಣೇಸ್ ಸಿಂಗ್, ರಾಕೇಶ್ ಸಿಂಗ್, ರಿತಿ ಪಾಠಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರಿಗೂ ಟಿಕೆಟ್ ನೀಡಲಾಗಿದೆ. ಹಾಗೆಯೇ, ಹೋಶಂಗಾಬಾದ್ ಸಂಸದ ಉದಯ ಪ್ರತಾಪ್ ಸಿಂಗ್ ಅವರು ಗದರವಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: MP Election 2023: ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ 450 ರೂ.! ಎಲೆಕ್ಷನ್ ಗೆಲ್ಲಲು ಉಚಿತ ಕೊಡುಗೆ
ಎರಡನೇ ಪಟ್ಟಿಯಲ್ಲಿ ಒಟ್ಟು 39 ಅಭ್ಯರ್ಥಿಗಳಿದ್ದು, ಈ ಪೈಕಿ 6 ಮಹಿಳೆಯರಿದ್ದಾರೆ. ಜತೆಗೆ 5 ಕ್ಷೇತ್ರಗಳು ಎಸ್ ಸಿ ಮತ್ತು 10 ಕ್ಷೇತ್ರಗಳು ಎಸ್‌ಟಿ ಮೀಸಲಾಗಿವೆ. ಬಿಜೆಪಿಯು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಘೋಷಣೆ ಮಾಡಿತ್ತು. ಮಧ್ಯ ಪ್ರದೇಶ ಮಾತ್ರವಲ್ಲದೇ, ರಾಜಸ್ಥಾನ, ತೇಲಂಗಾಣ, ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.