ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಗೆಲುವಿಗೆ ಇನ್ನಿಲ್ಲದ ರಣತಂತ್ರ ರೂಪಿಸುತ್ತಿರುವ ಬಿಜೆಪಿಯು (BJP) ಅಳೆದು-ತೂಗಿ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ, ಅಬ್ಬರದ ಪ್ರಚಾರಕ್ಕೂ ಬಿಜೆಪಿಯು ರಣತಂತ್ರ ರೂಪಿಸಿದ್ದು, ಚುನಾವಣೆ ಪ್ರಚಾರಕ್ಕಾಗಿಯೇ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ (BJP Star Campaigners List) ಮಾಡಿದೆ. ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷವು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿ ಸುಮಾರು 40 ನಾಯಕರಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಾಲ್ಕೂ ರಾಜ್ಯಗಳಲ್ಲಿ ಆಯಾ ರಾಜ್ಯಗಳಿಗೆ ನಿಯೋಜಿಸಿದ ಪ್ರಚಾರಕರು ಅಥವಾ ನಾಯಕರು ನಿಯಮಿತವಾಗಿ ರ‍್ಯಾಲಿ, ಸಮಾವೇಶಗಳ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸಲಿದ್ದಾರೆ. ಪಕ್ಷದ ಪ್ರಚಾರಕ್ಕಾಗಿ ದಿನಾಂಕ, ಸ್ಥಳ ಸೇರಿ ಎಲ್ಲ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
Lok Sabha Elections 2024 | BJP releases star campaigners including PM Modi, Amit Shah, JP Nadda, Rajnath Singh and Yogi Adityanath for Uttarakhand. pic.twitter.com/plaGrouXmJ
— ANI (@ANI) March 27, 2024
ಇಲ್ಲಿವೆ ಪ್ರಮುಖ ಸ್ಟಾರ್‌ಗಳ ಹೆಸರು
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಗಿರಿರಾಜ್ ಸಿಂಗ್, ನಿತ್ಯಾನಂದ ರೈ ಅವರು ಪಟ್ಟಿಯಲ್ಲಿದ್ದಾರೆ. ಇನ್ನು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ, ಹೇಮಾ ಮಾಲಿನಿ, ಅನುರಾಗ್ ಠಾಕೂರ್ ಸೇರಿ ಹಲವು ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಟ್ಟಿದವರೇ ಇಂದು ಮೂಲೆಗುಂಪು; ‘ಕಮಲ’ ನಾಯಕರ ಮೇಲೆ ಉಕ್ಕಿತು ಡಿಕೆಶಿ ಮಮತೆ!
ಉಮಾ ಭಾರತಿಗೆ ಕೊಕ್
ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಹಿರಿಯ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಡ್ಡಾಯವಾಗಿ ಇರುತ್ತಿತ್ತು. ಆದರೆ, ಈ ಬಾರಿ ಮಧ್ಯಪ್ರದೇಶ ಸೇರಿ ನಾಲ್ಕೂ ರಾಜ್ಯಗಳಲ್ಲಿ ಪ್ರಚಾರ ಕೈಗೊಳ್ಳುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಉಮಾ ಭಾರತಿ ಅವರ ಹೆಸರಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಟಿಕೆಟ್ ಸಿಗದಿದ್ದರೂ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ