Site icon Vistara News

Lok Sabha Election 2024: ಸಾರ್ವತ್ರಿಕ ಚುನಾವಣೆಗೆ ಮೆಗಾ ಪ್ಲಾನ್; ಬಿ.ಎಲ್.‌ ಸಂತೋಷ್‌ ಸಭೆ, ಏನೆಲ್ಲ ಬದಲಾವಣೆ?

BJP Strategy For Lok Sabha Election 2024

BJP Set For Mega Reshuffle Ahead Of 2024 Lok Sabha Election

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಬಿಜೆಪಿ ಸೇರಿ ಎಲ್ಲ ಪಕ್ಷಗಳು ಸಿದ್ಧತೆ ನಡೆಸಿವೆ. ಶತಾಯ ಗತಾಯ ಮೋದಿ ಸರ್ಕಾರವನ್ನು ಕೆಳಗಿಳಿಸಲು ಪ್ರತಿಪಕ್ಷಗಳು ತೀರ್ಮಾನಿಸಿದ್ದು, ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ. ಇನ್ನು ಎನ್‌ಡಿಎ ಹ್ಯಾಟ್ರಿಕ್‌ ಗೆಲುವು (Lok Sabha Election 2024) ಸಾಧಿಸಲು ಬಿಜೆಪಿ ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಲು ಹಲವು ಬದಲಾವಣೆ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಪಕ್ಷದಲ್ಲಿ ಬದಲಾವಣೆ, ರಣತಂತ್ರದ ದಿಸೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಪಕ್ಷದ ಬಲವರ್ಧನೆ, ಬಿಜೆಪಿ ಪ್ರಾಬಲ್ಯ ಇರದ ಕ್ಷೇತ್ರಗಳಲ್ಲಿ ಸಂಘಟನೆ ದೃಷ್ಟಿಯಿಂದ ಚರ್ಚೆ ನಡೆಸಲಾಗಿದ್ದು, ಪಕ್ಷದಲ್ಲಿ ಅಳೆದು-ತೂಗಿ ಮತ್ತಷ್ಟು ಜನರಿಗೆ ನಾಯಕತ್ವ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನೆಲ್ಲ ಬದಲಾವಣೆ?

ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷವನ್ನು ಬಲವರ್ಧನೆಗೊಳಿಸುವುದು ಬಿಜೆಪಿ ನಾಯಕರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಮೂವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ನಾಲ್ವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸುವುದು ಪಕ್ಷದ ಆದ್ಯತೆಯಾಗಿದೆ. ಯಾರಿಗೆ ಈ ಹುದ್ದೆಗಳನ್ನು ನೀಡಬೇಕು ಎಂಬ ಕುರಿತು ಕೂಡ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ಹೊಸ ನಾಯಕರ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಶೀಘ್ರವೇ ಸಂಪುಟ ಪುನರ್‌ರಚನೆ?

ಲೋಕಸಭೆ ಚುನಾವಣೆ ದೃಷ್ಟಿಯಿಂದ ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಉತ್ತರ ಪ್ರದೇಶದ ನಾಲ್ವರು, ಮಧ್ಯಪ್ರದೇಶದ ಒಬ್ಬರು, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡುವುದು ರಣತಂತ್ರವಾಗಿದೆ. ಆ ಮೂಲಕ ಈ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ, ಇದರ ಲಾಭವನ್ನು ಚುನಾವಣೆಯಲ್ಲಿ ಗಳಿಸುವುದು ಪಕ್ಷದ ಅಜೆಂಡಾ ಎಂಬ ಮಾತುಗಳು ಕೇಳಿಬಂದಿವೆ.

ರಾಜ್ಯಾಧ್ಯಕ್ಷರ ಬದಲಾವಣೆ ನಿರೀಕ್ಷೆ

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಆಕ್ರೋಶ ಕೇಳಿಬರುತ್ತವೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೂಗು ಕೇಳಿಬರುತ್ತಿದೆ. ಹಾಗಾಗಿ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Exit mobile version