ನವ ದೆಹಲಿ: ಲಿಕ್ಕರ್ ಪಾಲಿಸಿ ಹಗರಣ(Liquor Policy Scam)ಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವಿನ ಗುದ್ದಾಟ ಮುಗಿಯುವಂತೆ ಕಾಣುತ್ತಿಲ್ಲ. ಈ ಹಗರಣದಲ್ಲಿ ಮನಿಶ್ ಸಿಸೋಡಿಯಾ ಅವರು ‘ಕಿಕ್‌ಬ್ಯಾಕ್’ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಬಿಜೆಪಿಯು ಸ್ಟಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಬಿತ್ ಪಾತ್ರ ಅವರು ಸ್ಟಿಂಗ್ ಆಪರೇಷನ್ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ದಿಲ್ಲಿ ಲಿಕ್ಕರ್ ನೀತಿ ಅನುಷ್ಠಾನದಲ್ಲಿ ಆಪ್ ಭ್ರಷ್ಟಾಚಾರ ಮಾಡಿರುವುದನ್ನು ಈ ವಿಡಿಯೋ ಪ್ರೂವ್ ಮಾಡುತ್ತದೆ. ಈ ಹಗರಣದ ಆರೋಪಿಯಾಗಿರುವ ವ್ಯಕ್ತಿಯೊಬ್ಬ ದಿಲ್ಲಿ ಸರ್ಕಾರ ಕಮಿಷನ್ ತೆಗೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪಾತ್ರ ಅವರು ತಿಳಿಸಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕುಲ್ವಿಂದರ್ ಮಾರ್ವಾ ಎಂಬುವವರಿದ್ದಾರೆ. ಇವರ ಪುತ್ರನೇ ಹಗರಣದಲ್ಲಿ ಆರೋಪಿಯಾಗಿದ್ದಾನೆ.
ಒಂದು ವೇಳೆ, ಒಂದು ಮದ್ಯದ ಬಾಟಲಿ ಜೊತೆ ಮತ್ತೊಂದು ಬಾಟಲಿ ಉಚಿತವಾಗಿ ಕೊಟ್ಟರೂ ಅವರು ಲಾಭವನ್ನು ಮಾಡಿಕೊಳ್ಳುತ್ತಿದ್ದರು. ಅಂದರೆ, ಎಷ್ಟರಮಟ್ಟಿಗೆ ಲೂಟಿ ಮಾಡಲಾಗುತ್ತಿದೆ ಎಂಬುದನ್ನು ಊಹಿಸಬಹುದಾಗಿದೆ ಎಂದು ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಪ್ಪು ಪಟ್ಟಿಯಲ್ಲಿರುವ ಕಂಪನಿಗಳಿಗೂ ಲೈಸೆನ್ಸ್ ನೀಡಿರುವ ಸಂಗತಿಯ ಬಗೆಗಿನ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಒಂದು ರೂಪಾಯಿಯಲ್ಲಿ 20 ಪೈಸೆಯಷ್ಟು ಮಾತ್ರ ವಸ್ತುವಿಗಿರುತ್ತದೆ. ಉಳಿದ 80 ಪೈಸೆ ದಿಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಅವರು(ಸರ್ಕಾರ) ನಮ್ಮಿಂದ 253 ಕೋಟಿ ರೂ. ಪಡೆದುಕೊಂಡು, ಎಷ್ಟು ಬೇಕಾದರೂ ಅಂಗಡಿ ತೆರೆಯಿರಿ ಎಂದಿದ್ದಾರೆ. ದಿಲ್ಲಿ ಸರ್ಕಾರವು ಶ್ರೀಮಂತ ಜನರಿಂದ 500 ಕೋಟಿ ರೂ. ಪಡೆದುಕೊಂಡಿದೆ ಎಂದು ಮಾರ್ವಾ ಹೇಳುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿವೆ.
ಅರವಿಂದ್ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ತಮ್ಮ ಸ್ನೇಹಿತರಿಗೆ ಶೇ.80ರಷ್ಟು ಲಾಭವನ್ನು ಮಾಡಿಕೊಟ್ಟಿದ್ದಾರೆ. ನಿಮ್ಮ ಅಂಗಡಿಯ ವಿಡಿಯೋ ಮಾಡಿ ಮತ್ತು ಅದಕ್ಕಾಗಿ ಎಷ್ಟು ಕಮಿಷನ್ ಕೊಟ್ಟಿದ್ದೀರಿ ಎಂಬ ಮಾಹಿತಿಯನ್ನು ಸಿಬಿಐಗೆ ನೀಡಿ ಎಂದು ಬಿಜೆಪಿ ಮನವಿ ಮಾಡಿಕೊಳ್ಳುತ್ತದೆ ಎಂದು ಪಾತ್ರ ಹೇಳಿದ್ದಾರೆ.
ಇದನ್ನೂ ಓದಿ | ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್ ಆಫರ್, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್ ಸಿಸೋಡಿಯಾ ಆರೋಪ