ನವದೆಹಲಿ: ಪ್ರಸಕ್ತ ವರ್ಷ ನಡೆಯಲಿರುವ ೮ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಅದರಲ್ಲೂ, ಮುಸ್ಲಿಮರ ಮತಗಳನ್ನೂ ಸೆಳೆಯಲು ಕಮಲ ಪಾಳಯವು ಯೋಜನೆ ರೂಪಿಸಿದ್ದು, ಮಾರ್ಚ್ ೧೦ರಿಂದ ಮುಸ್ಲಿಮರನ್ನು ತಲುಪುವ, ಅವರ ಮನವೊಲಿಸುವ ಯೋಜನೆಗೆ (BJP Muslim Outreach Plan) ಚಾಲನೆ ನೀಡಲಾಗುತ್ತಿದೆ.
ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಇದಕ್ಕಾಗಿ ಯೋಜನೆ ರೂಪಿಸಿದೆ. ಮುಸ್ಲಿಮರ ತಲುಪುವ ಯೋಜನೆಯ ಮೊದಲ ಹಂತದ ಭಾಗವಾಗಿ ೧೪ ರಾಜ್ಯಗಳ ೬೪ ಜಿಲ್ಲೆಗಳನ್ನು ಗುರುತಿಸಲಾಗಿದೆ. ಇಲ್ಲೆಲ್ಲ ಮುಸ್ಲಿಮರ ವಿಶ್ವಾಸ ಗಳಿಸುವುದು ಬಿಜೆಪಿ ಯೋಜನೆಯಾಗಿದೆ. ಜಮ್ಮು-ಕಾಶ್ಮೀರ, ದೆಹಲಿ, ಗೋವಾ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಲಡಾಕ್, ಕೇರಳ, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಮೊದಲ ಹಂತದ ಯೋಜನೆ ಜಾರಿಗೊಳಿಸಲಾಗುತ್ತದೆ.
ಮುಸ್ಲಿಮರ ತಲುಪಲು ಏನು ಯೋಜನೆ?
ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮುಸ್ಲಿಮರ ವಿಶ್ವಾಸ ಗಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಯೋಜನೆ ರೂಪಿಸಿದೆ. ೧೪ ರಾಜ್ಯಗಳ ೬೪ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ತಲುಪಲು ರಾಷ್ಟ್ರೀಯ ತಂಡ ಹಾಗೂ ರಾಷ್ಟ್ರೀಯ ಉಸ್ತುವಾರಿಗಳ ತಂಡವನ್ನು ರಚಿಸಿದೆ. ಶೇ.೩೦ಕ್ಕೂ ಅಧಿಕ ಮುಸ್ಲಿಮರು ಇರುವ ೬೦ ಲೋಕಸಭೆ ಕ್ಷೇತ್ರಗಳನ್ನು ಗುರುತಿಸಲಾಗಿದೆ.
ಈಗಾಗಲೇ ಸುಮಾರು ೫ ಸಾವಿರ ಜನರನ್ನು ಗುರುತಿಸಲಾಗಿದೆ. ಹೀಗೆ, ಬಿಜೆಪಿಯಿಂದ ಗುರುತಿಸಿಕೊಂಡವರು ಬಿಜೆಪಿಯವರು ಅಲ್ಲ. ಆದರೆ, ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ಲಾಭ ಪಡೆದವರಾಗಿದ್ದಾರೆ. ಮುಸ್ಲಿಮರಲ್ಲಿಯೇ ವೈದ್ಯರಾದವರು, ಎಂಜಿನಿಯರ್, ಪತ್ರಕರ್ತರು, ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಹಾಗೂ ಉದ್ಯಮ ಸ್ಥಾಪಿಸಿದವರು ಇದ್ದಾರೆ. ಇವರನ್ನು ಬಿಜೆಪಿ ನಾಯಕರು ಸಂಪರ್ಕಿಸಿ, ಅವರ ಮೂಲಕ ಇಡೀ ಮುಸ್ಲಿಂ ಸಮುದಾಯಕ್ಕೆ ಬಿಜೆಪಿಯ ಯೋಜನೆಗಳನ್ನು ಮನವರಿಕೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.