ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ (L K Advani) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಗುರುವಾರ (ಜೂನ್ 27) ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಿಂದ (AIIMS Hospital) ಡಿಸ್‌ಚಾರ್ಜ್ ಮಾಡಲಾಗಿದೆ. “ಎಲ್.ಕೆ.ಅಡ್ವಾಣಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ಕಾರಣ ಆಸ್ಪಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ” ಎಂಬುದಾಗಿ ಏಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬುಧವಾರ ರಾತ್ರಿ (ಜೂನ್ 26) ಎಲ್.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು 10.30ರ ಸುಮಾರಿಗೆ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಬಿಜೆಪಿ ನಾಯಕರು ಅವರು ಶೀಘ್ರವೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸಿದ್ದರು. 96 ವರ್ಷದ ಎಲ್.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಕ್ಕೆ ಬಿಜೆಪಿ ಹಲವು ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
#WATCH | Delhi: 96-year-old veteran BJP leader LK Advani discharged from AIIMS today. He was admitted here last night. pic.twitter.com/R06UOd7qef
— ANI (@ANI) June 27, 2024
ಈ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದರಾದ ಅಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ.
ಅಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಎಲ್‌ಕೆ ಅಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: Narendra Modi: ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ್ದೇ ಹೆಮ್ಮೆ; ಮೋದಿ ಭಾವುಕ ನುಡಿ