ಲಖನೌ: ಕರ್ನಾಟಕ, ತೆಲಂಗಾಣದಲ್ಲಿ ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ (Muslims Reservation) ನೀಡಿರುವ ವಿಚಾರವು ಲೋಕಸಭೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಮೀಸಲಾತಿ ವಿಷಯವು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ವಾದ, ಟೀಕೆ, ಆಕ್ರೋಶಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, “ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಒಬಿಸಿ ಮೀಸಲಾತಿಯನ್ನು (OBC Reservation) ಮತ್ತೆ ಒಬಿಸಿಗೇ ನೀಡಲಾಗುವುದು” ಎಂದು ಅಮಿತ್ ಶಾ (Amit Shah) ಪುನರುಚ್ಚರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿಯು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂಬುದಾಗಿ ರಾಹುಲ್ ಗಾಂಧಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಸುಳ್ಳುಗಳಲ್ಲೇ ರಾಹುಲ್ ಗಾಂಧಿ ಅವರು ಚುನಾವಣೆ ಮುಗಿಸುತ್ತಿದ್ದಾರೆ. ಆದರೆ, ಒಂದು ನೆನಪಿರಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸಲ್ಲ ಹಾಗೂ ಬೇರೆಯವರಿಗೂ ಬಿಡಲ್ಲ. ಇದು ಮೋದಿ ಅವರ ಗ್ಯಾರಂಟಿಯಾಗಿದೆ” ಎಂಬುದಾಗಿ ಅಮಿತ್ ಶಾ ಹೇಳಿದ್ದಾರೆ.
#WATCH | Uttar Pradesh: Addressing a public rally in Kasganj, Union Home Minister Amit Shah says, "Rahul Baba is spreading lies in the name of backward classes. He says that if BJP wins 400 seats, BJP will remove reservation in the country. He doesn't understand, that we had two… pic.twitter.com/iFXLuNC14w
— ANI (@ANI) April 28, 2024
“ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿಯನ್ನು ಬೆಂಬಲಿಸುತ್ತಾರೆ. ನರೇಂದ್ರ ಮೋದಿ ಸರ್ಕಾರ 400 ಕ್ಷೇತ್ರಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗೆ ನೀಡಲಾಗುತ್ತದೆ. ಇದು ಮೋದಿ ಅವರ ಗ್ಯಾರಂಟಿಯಾಗಿದೆ. ರಾಹುಲ್ ಗಾಂಧಿ ಅವರಿಗೆ ವಾಸ್ತವದ ಅರಿವಿಲ್ಲ. ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಬಿಜೆಪಿಯೇ ಬಹುಮತದ ಸರ್ಕಾರ ರಚಿಸಿ, ಆಡಳಿತ ನಡೆಸಿದೆ ಎಂಬುದರ ಅರಿವಿಲ್ಲ. ಎರಡು ಅವಧಿ ಆಡಳಿತ ನಡೆಸಿದರು ಬಿಜೆಪಿಯು ಮೀಸಲಾತಿಯನ್ನು ತೆಗೆದಿಲ್ಲ” ಎಂದು ತಿಳಿಸಿದರು.
ಮೀಸಲಾತಿ ಕುರಿತ ಚರ್ಚೆಯ ಮಧ್ಯೆಯೇ, ಆರ್‌ಎಸ್‌ಎಸ್ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದು ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್ ಮೀಸಲಾತಿಯನ್ನು ವಿರೋಧಿಸುತ್ತದೆ ಎಂದು ಹೇಳಿರುವ ವಿಡಿಯೊ ಹರಿದಾಡುತ್ತಿದೆ. ಆದರೆ, ಸಂಘ ಪರಿವಾರವು ಮೊದಲಿನಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಆರ್‌ಎಸ್‌ಎಸ್ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮುದಾಯಗಳಿಗೆ ಎಲ್ಲಿಯವರೆಗೆ ಮೀಸಲಾತಿಯ ಅವಶ್ಯಕತೆ ಇದೆಯೋ, ಅಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Mohan Bhagwat: ಆರ್‌ಎಸ್‌ಎಸ್ ಮೀಸಲಾತಿ ಪರ; ಮೋಹನ್ ಭಾಗವತ್ ದಿಢೀರನೆ ಹೀಗೆ ಹೇಳಿದ್ದೇಕೆ?