ಗಾಂಧಿನಗರ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಬೇಕು ಎಂಬ ಒತ್ತಾಯ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸುಪ್ರೀಂ ಕೋರ್ಟ್ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, “ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಶತಸಿದ್ಧ” ಎಂದು ಘೋಷಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು 1950ರಿಂದಲೂ ನಮ್ಮ ಪ್ರಣಾಳಿಕೆಯಲ್ಲಿದೆ. ನಮ್ಮದು ಜಾತ್ಯತೀತ ರಾಷ್ಟ್ರವಾದ ಕಾರಣ ದೇಶದ ಪ್ರತಿಯೊಬ್ಬ ನಾಗರಿಕರಿಗೂ, ಎಲ್ಲ ಧರ್ಮೀಯರಿಗೂ ಒಂದೇ ಕಾನೂನು ಅನ್ವಯವಾಗಬೇಕು. ಇದೇ ನಮ್ಮ ಆಶಯವಾಗಿದ್ದು, ದೇಶಾದ್ಯಂತ ಯುಸಿಸಿ ಜಾರಿಗೊಳಿಸುತ್ತೇವೆ” ಎಂದು ತಿಳಿಸಿದ್ದಾರೆ.
ಆಕ್ಷೇಪವಿದ್ದವರು ಕೋರ್ಟ್‌ಗೆ ಹೋಗಲಿ
ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, “ತನಿಖಾ ಸಂಸ್ಥೆಗಳ ತನಿಖೆ ಕುರಿತು ಅಷ್ಟೊಂದು ಆಕ್ಷೇಪಗಳಿದ್ದರೆ ಪ್ರತಿಪಕ್ಷಗಳು ಕೋರ್ಟ್‌ಗೆ ಹೋಗಲಿ” ಎಂದಿದ್ದಾರೆ. “ದೇಶದಲ್ಲಿ ಮೂರು ಬಗೆಯ ಕೋರ್ಟ್‌ಗಳಿವೆ. ಸೆಷನ್ಸ್ ಕೋರ್ಟ್, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಇವೆ. ಪ್ರತಿಪಕ್ಷಗಳು ಮಾಧ್ಯಮಗಳ ಎದುರು ಆಕ್ರೋಶ ವ್ಯಕ್ತಪಡಿಸುವ ಬದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Uniform Civil Code | ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ!