Site icon Vistara News

Gujarat Election Results | ಮಸ್ಲಿಮ್‌ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ; ಏನಿದು ತಂತ್ರ?

Congress BJP

ಅಹಮದಾಬಾದ್‌ : ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ (Gujarat Election Results) ಈವರೆಗೆ ಕಂಡು ಕೇಳರಿಯದ ರೀತಿಯಲ್ಲಿ ೧೫೬ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಈ ಪ್ರಚಂಡ ವಿಜಯಕ್ಕಾಗಿ ತನ್ನ ಜನಪ್ರಿಯತೆ ಜತೆಗೆ ಹಲವಾರು ಚುನಾವಣಾ ರಣತಂತ್ರಗಳನ್ನೂ ಬಳಸಿಕೊಂಡಿದೆ. ಹೀಗಾಗಿ ಪ್ರತಿ ಬಾರಿಯೂ ಮುಸ್ಲಿಮ್‌ ಸಮುದಾಯದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಿದ್ದ ಕ್ಷೇತ್ರಗಳಲ್ಲೂ ಈ ಬಾರಿ ಬಿಜೆಪಿ ಹುರಿಯಾಳುಗಳು ಗೆದ್ದು ಬೀಗಿದ್ದಾರೆ.

ಗುಜರಾತ್‌ನಲ್ಲಿ ಒಟ್ಟು ೧೮೨ ಕ್ಷೇತ್ರಗಳಲ್ಲಿ ೧೭ರಲ್ಲಿ ಮುಸ್ಲಿಮ್‌ ಸಮುದಾಯದ ಪ್ರಾಬಲ್ಯವಿದೆ. ಇವುಗಳಲ್ಲಿ ೧೨ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ ಎಂಬುದು ಅಚ್ಚರಿಯ ಸಂಗತಿ. ಈ ಮೂಲಕ ಚುನಾವಣಾ ರಣತಂತ್ರದಲ್ಲಿ ನಮ್ಮನ್ನು ಮೀರಿಸುವವರು ಯಾರೂ ಇಲ್ಲ ಎಂಬುದನ್ನು ಬಿಜೆಪಿ ದಂಡ ನಾಯಕರು ಸಾಬೀತುಪಡಿಸಿದ್ದಾರೆ.

ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಜಯ ಖಾತರಿ ಎಂಬ ಕಾಂಗ್ರೆಸ್‌ನ ನಿರೀಕ್ಷೆಯೂ ಹುಸಿಯಾಗಿದೆ. ಒಬ್ಬನೇ ಒಬ್ಬ ಮುಸ್ಲಿಮ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಬಿಜೆಪಿ ಸುಲಭವಾಗಿ ಅಂಥ ಕ್ಷೇತ್ರಗಳಲ್ಲಿ ಪಾರುಪತ್ಯ ಸ್ಥಾಪಿಸಿದೆ. ಹೀಗಾಗಿ ಈ ೧೭ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾಲಿಕೆ ದಕ್ಕಿದ್ದು ೫ ಕ್ಷೇತ್ರಗಳು ಮಾತ್ರ.

ಹೇಗೆ ಲಾಭ?

ಮುಸ್ಲಿಮ್‌ ಬಾಹುಳ್ಯ ಹೊಂದಿರುವ ಪ್ರದೇಶದಲ್ಲಿ ಬಿಜೆಪಿಗೆ ಲಾಭವಾಗಿರುವುದು ಮತಗಳ ವಿಭಜನೆಯಿಂದಾಗಿ. ಇಂಥ ಕ್ಷೇತ್ರಗಳಲ್ಲಿ ಮುಸ್ಲಿಮ್‌ ಸಮುದಾಯದ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಿಜೆಪಿಗೆ ವರದಾನವಾಯಿತು. ಕಾಂಗ್ರೆಸ್ ಹುಡುಕಿ, ಹುಡುಕಿ ಮುಸ್ಲಿಮ್‌ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದರೆ, ಪಕ್ಷೇತರರು, ಆಪ್‌ ಹಾಗೂ ಅಸಾದುದ್ದೀನ್‌ ಒವೈಸಿಯ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು ಮತಗಳನ್ನು ವಿಭಜನೆ ಮಾಡಿದರು. ಈ ಬೆಳವಣಿಗೆ ಶೇಕಡಾ ೪೬ರಷ್ಟು ಮುಸ್ಲಿಮ್‌ ಮತ ಹೊಂದಿರುವ ಕ್ಷೇತ್ರದಲ್ಲೂ ಬಿಜೆಪಿಗೆ ಲಾಭ ತಂದುಕೊಟ್ಟಿತು.

ಮೇಲಿನ ಲೆಕ್ಕಾಚಾರ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುವುದಿಲ್ಲ. ಮತ ಹಂಚಿಕೆ ಪ್ರಮಾಣವನ್ನು ನೋಡಿದಾಗ ಬಿಜೆಪಿ ಪಡೆದಿರುವ ಮತಗಳು ಹಾಗೂ ಎಎಪಿ, ಕಾಂಗ್ರೆಸ್ ಹಾಗೂ ಇತರರು ಪಡೆದಿರುವ ಮತಗಳಿಗೆ ತಾಳೆಯಾಗುವುದಿಲ್ಲ. ಬಿಜೆಪಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡಿದೆ. ಈ ಮೂಲಕ ಮುಸ್ಲಿಮೇತರ ಮತಗಳನ್ನು ಸಂಪೂರ್ಣವಾಗಿ ತಮ್ಮೆಡೆಗೆ ಒಲಿಸಿಕೊಂಡಿದೆ.

ಉದಾಹರಣೆಗೆ ದರಿಯಾಪುರ್‌ ಕ್ಷೇತ್ರ ಮುಸ್ಲಿಮ್ ಪ್ರಭಾವದ ಕ್ಷೇತ್ರ. ೧೦ ವರ್ಷಗಳಿಂದ ಇದು ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ, ಈ ಬಾರಿ ಬಿಜೆಪಿಯ ಕೌಶಿಕ್‌ ಜೈನ್‌ ಗೆದ್ದಿದ್ದಾರೆ. ಮಾಜಿ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ಜ್ಯಾಸುದ್ದೀನ್‌ ಶೇಖ್‌ ಸೋಲುಂಡಿದ್ದಾರೆ. ಅಂತೆಯೇ ೧೦ ವರ್ಷದ ಕೂಸು ಆಮ್‌ ಆದ್ಮಿಯೂ ೧೬ ಮುಸ್ಲಿಮ್‌ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಒಂದರಲ್ಲೂ ಸಿಹಿ ಸುದ್ದಿ ಕೇಳಿಲ್ಲ. ಓವೈಸಿ ಪಕ್ಷಕ್ಕೂ ಏನೂ ಗಿಟ್ಟಿಲ್ಲ. ಆದರೆ, ಕಾಂಗ್ರೆಸ್ ಓಟ್‌ಗಳನ್ನು ಈ ಎರಡೂ ಪಕ್ಷಗಳು ವಿಭಜಿಸಿವೆ. ಇದರ ಫಲವನ್ನು ಬಿಜೆಪಿ ಉಂಡಿದೆ.

ಎಐಎಮ್‌ಐಎಮ್‌ ೧೩ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇವರಲ್ಲಿ ಇಬ್ಬರು ಮುಸ್ಲಿಮೇತರರು. ಅವರಲ್ಲಿ ಯಾರೂ ಗೆದ್ದಿಲ್ಲ. ಜಮಲ್‌ಪುರ್‌, ವಡಗಾಮ್‌ನಲ್ಲೂ ಸೋಲು ಕಂಡಿದೆ. ಇವೆರಡೂ ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳು.

ಜಹಾಪುರ, ಸೂರತ್‌ ಪೂರ್ವ ಕ್ಷೇತ್ರ, ಬರೂಚ್‌ನ ವಗ್ರಾ, ಗೋದ್ರಾ ಹಾಗೂ ಭುಜ್‌ನಲ್ಲೂ ಇದೇ ಮಾದರಿಯ ಬೆಳವಣಿಗೆಗಳು ಕಂಡು ಬಂದಿವೆ. ಆಪ್‌ ಮತ್ತು ಎಐಎಮ್‌ಐಎಮ್‌ ಮತಗಳನ್ನು ವಿಭಜನೆ ಮಾಡಿದ ಹೊರತಾಗಿಯೂ ಬಿಜೆಪಿಯ ಅಭ್ಯರ್ಥಿಗಳು ಶೇಕಡಾವಾರು ಮತ ಗಳಿಕೆಯಲ್ಲಿ ಭರ್ಜರಿ ಲಾಭ ಗಿಟ್ಟಿಸಿದ್ದಾರೆ.

ಇದನ್ನೂ ಓದಿ | Gujarat Election results | ಗುಜರಾತ್‌ನಲ್ಲಿ ಬಿಜೆಪಿಯ ಐತಿಹಾಸಿಕ ವಿಜಯಕ್ಕೆ ಆಪ್‌ ಕಾರಣವಾಯಿತೇ?

Exit mobile version