ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷದ ಶಾಸಕರ ಖರೀದಿಗೆ ಯತ್ನಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಅವರಿಗೆ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ಡಿಸೆಂಬರ್ 5ರವರೆಗೆ ತಡೆಯಾಜ್ಞೆ ನೀಡಿದೆ.
ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಂತೋಷ್ ಅವರಿಗೆ ಎಸ್‌ಐಟಿ ಎರಡನೇ ನೋಟಿಸ್ ನೀಡಿತ್ತು. ನವೆಂಬರ್ 26 ಅಥವಾ ನವೆಂಬರ್ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. “ಬಿ.ಎಲ್.ಸಂತೋಷ್ ಅವರು ಪೂರ್ವನಿರ್ಧರಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಾರಣ ಮೊದಲ ನೋಟಿಸ್‌ಗೆ ಪ್ರತಿಕ್ರಿಯಿಸಲು ಹಾಗೂ ವಿಚಾರಣೆಗೆ ಹಾಜರಾಗಲು ಆಗಿರಲಿಲ್ಲ. ಎಸ್‌ಐಟಿ ಅಧಿಕಾರಿಗಳು ಪ್ರಕರಣದಲ್ಲಿ ಆಧಾರವಿಲ್ಲದೆ ಸಂತೋಷ್ ಅವರಿಗೆ ನೋಟಿಸ್ ನೀಡಿದ್ದಾರೆ. ಪ್ರಕರಣಕ್ಕೂ ಬಿಜೆಪಿ ನಾಯಕರಿಗೂ ಸಂಬಂಧವಿಲ್ಲ” ಎಂದು ಸಂತೋಷ್ ಪರ ವಕೀಲರು ವಾದ ಮಂಡಿಸಿದರು. ಬಳಿಕ ನ್ಯಾಯಾಲಯವು ಎಸ್‌ಐಟಿ ನೋಟಿಸ್‌ಗೆ ತಡೆಯಾಜ್ಞೆ ನೀಡಿತು.
ಆಡಳಿತಾರೂಢ ಪಕ್ಷದ ನಾಲ್ವರು ಶಾಸಕರ ಖರೀದಿಗೆ 100 ಕೋಟಿ ರೂ. ಆಮಿಷ ಒಡ್ಡಿರುವ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಸಂತೋಷ್ ಹೆಸರು ಕೂಡ ಕೇಳಿಬಂದಿದೆ.
ಇದನ್ನೂ ಓದಿ | BL Santosh | ಬಿಜೆಪಿ ನಾಯಕ ಸಂತೋಷ್ ಈಗ ತೆಲಂಗಾಣ ಶಾಸಕರ ಖರೀದಿ ಪ್ರಕರಣದ ಆರೋಪಿ