ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಸ್ಥಾನಗಳು 240 ಸ್ಥಾನಗಳಿಗೆ ಕುಸಿದಿದ್ದು, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಚುನಾವಣೆಯಲ್ಲಿ ಬಿಜೆಪಿ (BJP) ಸ್ಥಾನಗಳು ಕುಸಿದಿರುವುದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ (Rajya Sabha) ಕೂಡ ಬಿಜೆಪಿ ಬಲವು ಕುಸಿತಗೊಂಡಿದೆ. ನಾಮನಿರ್ದೇಶನಗೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ.
ರಾಕೇಶ್ ಸಿನ್ಹಾ, ರಾಮ್ ಶಕಾಲ್, ಸೋನಾಲ್ ಮಾನ್‌ಸಿಂಗ್ ಹಾಗೂ ಮಹೇಶ್ ಜೇಠ್ಮಲಾನಿ ಅವರ ಅವಧಿಯು ಮುಕ್ತಾಯಗೊಂಡ ಕಾರಣ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಎನ್‌ಡಿಎ ಬಲವು 101ಕ್ಕೆ ಇಳಿಕೆಯಾಗಿದೆ. ಒಟ್ಟು 245 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಈಗ 225 ಸದಸ್ಯರು ಇದ್ದು, ಬಹುಮತಕ್ಕೆ 113 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಆದಾಗ್ಯೂ, ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ 7 ನಾಮನಿರ್ದೇಶನಗೊಂಡಿರುವ ಸದಸ್ಯರ ಬಲವೂ ಎನ್‌ಡಿಎಗೆ ಇದೆ. ಅಲ್ಲಿಗೆ, ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತಕ್ಕೆ ಇನ್ನೂ 4 ಸದಸ್ಯರ ಕೊರತೆ ಇದೆ.
ಕಾಂಗ್ರೆಸ್ ಬಲಾಬಲ ಹೇಗಿದೆ?
ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು 87 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್ 26, ತೃಣಮೂಲ ಕಾಂಗ್ರೆಸ್ 13, ಆಮ್ ಆದ್ಮಿ ಪಕ್ಷ, ಡಿಎಂಕೆ ಪಕ್ಷಗಳು ತಲಾ 10 ಸದಸ್ಯರನ್ನು ಹೊಂದಿವೆ. ಉಳಿದ ಸ್ಥಾನಗಳು ತೆಲಂಗಾಣದ ಬಿಆರ್‌ಎಸ್, ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವತಂತ್ರ ಸದಸ್ಯರಾಗಿದ್ದಾರೆ. ಆದಾಗ್ಯೂ, ಬಿಜೆಪಿಯು ಪ್ರಸಕ್ತ ವರ್ಷ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಹಾಗೆಯೇ, 11 ಸ್ಥಾನಗಳಿಗೆ ಚುನಾವಣೆಯೂ ನಡೆಯಲಿದೆ. ಹಾಗಾಗಿ, ಶೀಘ್ರದಲ್ಲೇ ಬಿಜೆಪಿಯು ಮೇಲ್ಮನೆಯಲ್ಲಿ ಬಹುಮತ ಸಾಧಿಸಲಿದೆ ಎಂದೇ ತಜ್ಞರು ವಿಶ್ಲೇಷಿಸಿದ್ದಾರೆ.
ಸೀಟು ಕಡಿಮೆಯಾದರೆ ಬಿಜೆಪಿಗೆ ಹೇಗೆ ತೊಂದರೆ?
ರಾಜ್ಯಸಭೆಯಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾದರೆ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗಲಿದೆ. ಮಹತ್ವದ ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅನುಮೋದನೆ ಪಡೆಯಲು ಆಗುವುದಿಲ್ಲ. ಹಾಗಾಗಿ, ಬಿಜೆಪಿಯು ಈಗ ವಿಧೇಯಕಗಳಿಗೆ ಅನುಮೋದನೆ ಪಡೆಯಲು ಎನ್‌ಡಿಎ ಜತೆಗೆ ಇರದ ಎಐಎಡಿಎಂಕೆ ಹಾಗೂ ಆಂಧ್ರಪ್ರದೇಶದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ, ಯಾವುದೇ ವಿದೇಯಕಗಳಿಗೆ ಅಂಗೀಕಾರ ಸಿಗಲು ಬಿಜೆಪಿಯು ಬಹುಮತ ಗಳಿಸಲೇಬೇಕಿದೆ.