Site icon Vistara News

Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

Suresh Gopi

BJP's Suresh Gopi Calls Indira Gandhi "Mother Of India", Marxist Veteran Political Guru

ತಿರುವನಂತಪುರಂ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕೇರಳದ ತ್ರಿಶೂರ್‌ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್‌ ಗೋಪಿ ಅವರು ಗೆಲುವು ಸಾಧಿಸುವ ಮೂಲಕ ದೇವರ ನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿ (Narendra Modi) ಅವರು ಇವರಿಗೆ ಸಚಿವ ಸ್ಥಾನವನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ, “ಇಂದಿರಾ ಗಾಂಧಿ (Indira Gandhi) ಅವರು ದೇಶದ ತಾಯಿ. ಮಾರ್ಕ್ಸ್‌ವಾದಿ ನಾಯಕ ಇ.ಕೆ. ನಾಯನಾರ್‌ ನನ್ನ ರಾಜಕೀಯ ಗುರು” ಎಂದು ಸುರೇಶ್‌ ಗೋಪಿ (Suresh Gopi) ಹೇಳಿಕೆ ನೀಡಿದ್ದಾರೆ.

ಕೇರಳ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕರೂ ಆಗಿದ್ದ ಕೆ. ಕರುಣಾಕರನ್‌ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಪುಂಕುಣ್ಣಮ್‌ನಲ್ಲಿ ಸುದ್ದಿಗಾರರೊಂದಿಗೆ ಸುರೇಶ್‌ ಗೋಪಿ ಮಾತನಾಡಿದರು. “ಇಂದಿರಾ ಗಾಂಧಿ ಅವರು ಭಾರತದ ಮಾತೆ ಇದ್ದಂತೆ. ಕೇರಳದಲ್ಲಿ ಕೆ. ಕರುಣಾಕರನ್‌ ಅವರು ತಂದೆ ಇದ್ದಂತೆ. ಇವರು ತುಂಬ ದಿಟ್ಟ ಆಡಳಿತಗಾರರಾಗಿದ್ದರು. ಕೆ. ಕರುಣಾಕರನ್‌ ಹಾಗೂ ಮಾರ್ಕ್ಸ್‌ವಾದಿ ಇ.ಕೆ. ನಾಯನಾರ್‌ ಅವರು ನನ್ನ ರಾಜಕೀಯ ಗುರು” ಎಂದು ಹೇಳಿದ್ದಾರೆ.

ಸುರೇಶ್‌ ಗೋಪಿ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಾದ ಬಳಿಕ ಅವರು ಸ್ಪಷ್ಟನೆ ನೀಡಿದ್ದರು. “ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ಶುದ್ಧ ಸುಳ್ಳು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇರಳದ ಏಳಿಗೆಗೆ ಶ್ರಮಿಸುತ್ತೇನೆ” ಎಂಬುದಾಗಿ ಸುರೇಶ್‌ ಗೋಪಿ ಅವರು ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು.

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು. 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Exit mobile version