ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯಿದೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಭಾರತೀಯ ಕಿಸಾನ್ ಯೂನಿಯನ್ (BKU) ರೈತ ಒಕ್ಕೂಟವು ರೈತ ಮುಖಂಡ ರಾಕೇಶ್ ಸಿಂಗ್ ಕಾಯತ್ ಮತ್ತು ಅವರ ಸೋದರ ನರೇಶ್ ಟಿಕಾಯತ್‌ರನ್ನು ಸಂಘಟನೆಯಿಂದ ಉಚ್ಚಾಟನೆ ಮಾಡಿದೆ. ರಾಕೇಶ್ ಟಿಕಾಯತ್ ಬಿಕೆಯುದ ರಾಷ್ಟ್ರೀಯ ವಕ್ತಾರರಾಗಿದ್ದರೆ, ಅವರ ಅಣ್ಣ ನರೇಶ್ ಟಿಕಾಯತ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಇವರಿಬ್ಬರೂ ಹೋರಾಟದ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ. ರಾಜಕೀಯ ಪಕ್ಷವೊಂದರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದಡಿ ಇವರನ್ನು ಒಕ್ಕೂಟ ಉಚ್ಚಾಟನೆ ಮಾಡಿದೆ. ಮಹತ್ವದ ಸಂಗತಿಯೆಂದರೆ ಇವರಿಬ್ಬರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಿಕೆಯು ಸಂಸ್ಥಾಪಕರಲ್ಲಿ ಒಬ್ಬರು. ತಂದೆ ಸಂಸ್ಥಾಪಿಸಿದ ರೈತ ಒಕ್ಕೂಟದಿಂದ ಮಕ್ಕಳಿಬ್ಬರೂ ಹೊರಬಿದ್ದಿದ್ದಾರೆ.
ರಾಜಕೀಯೇತರ ಸಂಘಟನೆ
ಬಿಕೆಯು ಮುಖ್ಯಸ್ಥರಾಗಿದ್ದ ನರೇಶ್ ಟಿಕಾಯತ್ ಉಚ್ಚಾಟನೆ ಬೆನ್ನಲ್ಲೇ ಒಕ್ಕೂಟಕ್ಕೆ ರಾಜೇಶ್ ಸಿಂಗ್ ಚೌಹಾಣ್ ಅವರು ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಹಾಣ್, ಭಾರತೀಯ ಕಿಸಾನ್ ಯೂನಿಯನ್ ರಚನೆಯಾಗಿದ್ದು ರೈತರ ಹಕ್ಕುಗಳ ರಕ್ಷಣೆಗಾಗಿ. ಆದರೆ ಟಿಕಾಯತ್ ಸೋದರರ ಆಡಳಿತದಲ್ಲಿ ಇದು ರಾಜಕೀಯ ಕ್ಷೇತ್ರವಾಗಿ ಬದಲಾಗಿತ್ತು. ನಮ್ಮದು ರಾಜಕೀಯೇತರ ಸಂಸ್ಥೆ. ಹಾಗೇ ಮುಂದುವರಿಯಬೇಕು ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಕಾಯಿದೆಗಳ ವಿರುದ್ಧ ರೈತ ಸಂಘಟನೆಗಳು ದೆಹಲಿಯ ವಿವಿಧ ಗಡಿಗಲಲ್ಲಿ ಸುಮಾರು ಒಂದು ವರ್ಷ ಪ್ರತಿಭಟನೆ ನಡೆಸಿದ್ದನ್ನು ಒಮ್ಮೆ ನೆನಪಿಸಿಕೊಂಡರೆ, ಆ ಹೋರಾಟದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿ ಬಂದ ಹೆಸರು ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯತ್. ಅದರಲ್ಲೂ ರಾಕೇಶ್ ಟಿಕಾಯತ್ ತುಂಬ ಪ್ರಚಾರದಲ್ಲಿದ್ದರು. ಹೋರಾಟದ ರೂಪುರೇಷೆಗಳನ್ನು ಮಾಧ್ಯಮಗಳಿಗೆ ತಿಳಿಸುವುದು, ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವಲ್ಲಿ ಇವರೇ ಮುಂಚೂಣಿಯಲ್ಲಿದ್ದರು. ಮೂರೂ ಕಾಯಿದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯುವವರೆಗೂ ಇವರು ಗಡಿ ಬಿಟ್ಟು ಕದಲಿಲ್ಲ.
ಇದನ್ನೂ ಓದಿ | ನವೆಂಬರ್‌ನೊಳಗೆ ಹಂಗಾಮುವಾರು ಬೆಳೆ ಇತ್ಯರ್ಥ ಪಡಿಸಲು ಬಿ.ಸಿ. ಪಾಟೀಲ್ ಸೂಚನೆ
ಕೃಷಿ ಕಾಯಿದೆಗಳ ವಿರುದ್ಧ ಹೋರಾಟಕ್ಕೆ ಏನೇನು ಬೇಕೋ ಅದೆಲ್ಲವನ್ನೂ ರಾಕೇಶ್ ಟಿಕಾಟಯತ್ ಮಾಡಿದ್ದರು. ಕೊನೆಗಂತೂ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದರು. ಪಶ್ಚಿಮ ಬಂಗಾಳಕ್ಕೆ ಹೋಗಿ ಅಲ್ಲಿ ಕೂಡ ಕಮಲ ಪಕ್ಷದ ವಿರುದ್ಧ ಜನರನ್ನು ಎತ್ತಿಕಟ್ಟುವ ಕಾರ್ಯ ಮಾಡಿದ್ದರು. ಬಿಜೆಪಿ ರೈತ ವಿರೋಧಿ ಪಕ್ಷ. ಅದನ್ನು ಯಾವ ಚುನಾವಣೆಯಲ್ಲೂ ಗೆಲ್ಲಬೇಡಿ ಎಂದು ಸಾರಿದ್ದರು. ಪಶ್ಚಿಮ ಬಂಗಾಳದಲ್ಲಷ್ಟೇ ಅಲ್ಲ, ಇನ್ನೂ ಕೆಲವು ರಾಜ್ಯಗಳಿಗೆ ಭೇಟಿ ಕೊಟ್ಟಿದ್ದ ಟಿಕಾಯತ್ ಸಹೋದರರು ಬಿಜೆಪಿ ಸೋಲಿಸಲು ಬೇಕಾದ ತಂತ್ರಗಳನ್ನೆಲ್ಲ ರೂಪಿಸಿದ್ದರು. ಈ ಮೂಲಕ ಕೃಷಿ ಕಾಯ್ದೆ ಜಾರಿಗೊಳಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜಕೀಯವಾಗಿಯೇ ಕುಗ್ಗಿಸುವ ಪ್ರಯತ್ನಗಳನ್ನು ನಡೆಸಿದ್ದರು.
ಇನ್ನು 2022ರಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಕೂಡ ರಾಕೇಶ್ ಟಿಕಾಯತ್ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದರು. ಸಾರ್ವಜನಿಕ ಸಭೆಗಳನ್ನು ನಡೆಸಿ, ಉತ್ತರ ಪ್ರದೇಶದಲ್ಲಿ ಯಾವ ಕಾರಣಕ್ಕೂ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲು ಬಿಡಬೇಡಿ ಎಂದು ಜನರಿಗೆ ಕರೆ ಕೊಟ್ಟಿದ್ದರು. ಆದರೆ ಟಿಕಾಯತ್ ಸಹೋದರರ ಈ ನಡೆಯಿಂದ ಭಾರತೀಯ ಕಿಸಾನ್ ಯೂನಿಯನ್‌ನ ಇತರ ನಾಯಕರು, ಕಾರ್ಯಕರ್ತರು ಅಸಮಾಧಾನಗೊಂಡರು. ನಮ್ಮದು ರಾಜಕೀಯೇತರ ಸಂಘಟನೆ. ಆದರೆ ಟಿಕಾಯತ್ ಸೋದರರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈಗ ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯತ್ ಬಿಕೆಯುದಿಂದ ಹೊರಬಿದ್ದ ಬೆನ್ನಲ್ಲೇ, ಅವರೊಂದಿಗೆ ಇನ್ನೂ ಕೆಲವು ಪ್ರಮುಖರು ಹೊರನಡೆದಿದ್ದಾರೆ.
ಇದನ್ನೂ ಓದಿ | Explainer: ಹಿಮಾಚಲದಲ್ಲಿ ಖಲಿಸ್ತಾನ್ ಹೆಜ್ಜೆ: ಏನಿದರ ಹಕೀಕತ್?