Site icon Vistara News

Blast In Factory: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟಕ್ಕೆ ಐವರು ಬಲಿ

Firecracker Factory

Blast After Fire At Factory In Telangana's Sangareddy, 5 Feared Dead

ಹೈದರಾಬಾದ್:‌ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ (Sangareddy District) ರಾಸಾಯನಿಕ ಕಾರ್ಖಾನೆಯೊಂದರಲ್ಲಿ (Blast In Factory) ಬುಧವಾರ (ಏಪ್ರಿಲ್‌ 3) ಭೀಕರ ಸ್ಫೋಟ ಸಂಭವಿಸಿದ್ದು, ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಸಾಯನಿಕ ಸೋರಿಕೆಯ ಬಳಿಕ ಭೀಕರವಾಗಿ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಐವರು ಸುಟ್ಟು ಭಸ್ಮವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿದೆ.

ಭೀಕರ ಸ್ಫೋಟದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀಕರ ಹೊಗೆ ಆವರಿಸಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಯು ತೀವ್ರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನೂ 8-10 ಕಾರ್ಮಿಕರು ಕಾರ್ಖಾನೆಯಲ್ಲಿಯೇ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಚಂದಾಪುರ ಗ್ರಾಮದಲ್ಲಿರುವ ಎಸ್‌ಬಿಆರ್‌ ಆರ್ಗಾನಿಕ್ಸ್‌ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ಗಾಯಾಳುಗಳ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದುವರೆಗೆ ಮೃತರು ಹಾಗೂ ಗಾಯಾಳುಗಳ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ತೀವ್ರತೆ ಜಾಸ್ತಿ ಇದ್ದ ಕಾರಣ ಚಂದಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆತಂಕ ಮನೆಮಾಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fire Accident : ಮಂಡ್ಯದಲ್ಲಿ ಪಟಾಕಿ ಸ್ಫೋಟ; ಕಾರ್ಮಿಕ ಸಾವು, ಮತ್ತಿಬ್ಬರು ಗಂಭೀರ

ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟಕ್ಕೆ 15 ಜನ ಸಾವು

ಉತ್ತರ ಪ್ರದೇಶದ ಕೌಶಂಭಿ ಜಿಲ್ಲೆಯಲ್ಲಿ ಕಳೆದ ಫೆಬ್ರವರಿ 25ರಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಕೌಶಂಭಿ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೇ ವೇಳೆ ಸ್ಫೋಟ ಸಂಭವಿಸಿದ ಕಾರಣ ಎಲ್ಲ ಪಟಾಕಿಗಳು ಸಿಡಿದಿದ್ದವು. ಇದರ ತೀವ್ರತೆಗೆ ಪಟಾಕಿಯ ಸುತ್ತಲೂ ಹೊಗೆ ಆವರಿಸಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಮಿಳುನಾಡಿನ ವಿರುದ್ಧುನಗರ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಫೆಬ್ರವರಿ 17ರಂದು ಭೀಕರ ಸ್ಫೋಟ ಸಂಭವಿಸಿ 11 ಜನ ಮೃತಪಟ್ಟಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರುದ್ಧುನಗರ ಜಿಲ್ಲೆಯ ವೆಂಬಕೊಟ್ಟಾಯಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ ಅಷ್ಟೊತ್ತಿಗಾಗಲೇ ಹಲವು ಜನ ಮೃತಪಟ್ಟಿದ್ದರು ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version