Site icon Vistara News

ಜಮ್ಮು ಕಾಶ್ಮೀರದಲ್ಲಿ ಸ್ಫೋಟಕ್ಕೆ 3 ಯೋಧರಿಗೆ ಗಾಯ, ಆಸ್ಪತ್ರೆಗೆ ದಾಖಲು

kashmir

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್‌ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ವಾಹನದಲ್ಲಿ ಸ್ಫೋಟ ಸಂಭವಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖಾಸಗಿ ವಾಹನದಲ್ಲಿ ಗ್ರೆನೇಡ್‌ ತುಂಬಿಸಿ ಸ್ಫೋಟಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಪ್ರಕರಣಗಳು ಮತ್ತು ನಾಗರಿಕರ ಮೇಲೆ ದಾಳಿ ಹೆಚ್ಚುತ್ತಿದೆ. ಪ್ರತಿಯಾಗಿ ಭದ್ರತಾ ಪಡೆ ಮತ್ತು ಪೊಲೀಸರೂ ಭಯೋತ್ಪಾದನೆಯ ದಮನ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಕಾಶ್ಮೀರದಲ್ಲಿ ಪ್ರಧಾನಿಯವರ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಇತರ ರಾಜ್ಯಗಳಿಂದ ಇಲ್ಲಿಗೆ ಕೆಲಸಕ್ಕಾಗಿ ವಲಸೆ ಬರುವವರಿಗೆ ಉಗ್ರರ ಬೆದರಿಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸರಕಾರ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಇತ್ತೀಚೆಗೆ ಕಿರುತೆರೆ ನಟಿ ಅಮ್ರೀನಾ ಭಟ್‌ ಅವರನ್ನು ಅವರ ನಿವಾಸದ ಎದುರೇ ಭಯೋತ್ಪಾದಕರು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಘಟನೆ ನಡೆದ ಬೆನ್ನಲ್ಲೇ ಇಬ್ಬರು ಉಗ್ರರನ್ನು ಪೊಲೀಸರು ಎನ್‌ ಕೌಂಟರ್‌ ನಲ್ಲಿ ಹೊಡೆದುರುಳಿಸಿದ್ದರು.

Exit mobile version