ಅಮೃತಸರ: ಸಿಕ್ಖರ ಪವಿತ್ರ ತಾಣವಾದ ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರದ ಬಳಿ ಇನ್ನೊಂದು ಸ್ಫೋಟ ಸಂಭವಿಸಿದೆ. ಒಂದು ವಾರದಲ್ಲಿ ಇದು ಮೂರನೇ ಸ್ಫೋಟವಾಗಿದ್ದು, ಶಂಕಿತರನ್ನು ಬಂಧಿಸಲಾಗಿದೆ.
ಗೋಲ್ಡನ್ ಟೆಂಪಲ್ ಬಳಿಯ ಶ್ರೀ ಗುರು ರಾಮದಾಸ್ ಜಿ ನಿವಾಸ್ ಎಂಬಲ್ಲಿ ಮಧ್ಯರಾತ್ರಿಯ ಸುಮಾರಿಗೆ ಜೋರಾದ ಸ್ಫೋಟದ ಧ್ವನಿ ಕೇಳಿಸಿತು. ಏಳು ದಿನಗಳೊಳಗೆ ಇದು ಮೂರನೇ ಸ್ಫೋಟವಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಸ್ವರ್ಣಮಂದಿರ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಶನಿವಾರ (ಮೇ 6) ಮತ್ತು ಸೋಮವಾರ (ಮೇ 8) ಎರಡು ಸ್ಫೋಟಗಳು ಸಂಭವಿಸಿದ್ದವು.
ಇವು ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಗಳಾಗಿದ್ದು, ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇಂದು ಅಮೃತಸರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಪಂಜಾಬ್ ಪೊಲೀಸ್ ಡಿಜಿಪಿ ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಗುರುವಾರ ಮಧ್ಯಾಹ್ನ 12:15-12:30ರ ನಡುವೆ ಸ್ಫೋಟ ಸಂಭವಿಸಿದೆ. ಪೊಲೀಸರು ಇಬ್ಬರು ಶಂಕಿತರನ್ನು- ಒಬ್ಬ ಪುರುಷ ಮತ್ತು ಮಹಿಳೆ- ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯ ಬ್ಯಾಗ್‌ನಲ್ಲಿ ಕೆಲವು ಸ್ಫೋಟಕಗಳು ಪತ್ತೆಯಾಗಿವೆ. ಇಬ್ಬರ ಬ್ಯಾಗ್‌ಗಳಿಂದ ಕೆಲವು ಚುಚ್ಚುಮದ್ದುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಮೇ 6 ಮತ್ತು ಮೇ 8ರ ನಡುವೆ ನಡೆದ ಸ್ಫೋಟಗಳು ಹಣಕಾಸಿನ ವಿವಾದಕ್ಕೆ ಸಂಬಂಧಿಸಿರಬಹುದು; ಆದರೆ ಭಯೋತ್ಪಾದನೆಯ ಕೋನವನ್ನು ಸಹ ತನಿಖೆಗೊಳಪಡಿಸಲಾಗಿದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಮೇ 6ರಂದು ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಕೆಲವು ಕಟ್ಟಡಗಳ ಗಾಜು ಒಡೆದಿದೆ.
ಇದನ್ನೂ ಓದಿ: Golden Temple: ಪಂಜಾಬ್ ಸ್ವರ್ಣಮಂದಿರದ ಬಳಿ ಮತ್ತೊಂದು ಸ್ಫೋಟ; ಸ್ಥಳದಲ್ಲಿ ಆತಂಕ