ನವದೆಹಲಿ: ದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ (Israel embassy in Delhi) ಸಮೀಪವೇ ಸ್ಫೋಟ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ(Blast). ಸ್ಥಳಕ್ಕೆ ದಿಲ್ಲಿ ಪೊಲೀಸರು (Delhi Police) ಧಾವಿಸಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ. ರಾಯಭಾರ ಕಚೇರಿಯ ಸಮೀಪದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ದಿಲ್ಲಿ ಪೊಲೀಸರು ಮತ್ತು ಭದ್ರತಾ ತಂಡವು ಪರಿಸ್ಥಿತಿಯನ್ನು ತನಿಖೆ ಮಾಡುತ್ತಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು(spokesperson) ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ರಾಜತಾಂತ್ರಿಕ ನೆರೆಹೊರೆಯಾಗಿರುವ ಚಾಣಕ್ಯಪುರಿ ಪ್ರದೇಶದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಹಿಂದಿನ ಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ಕುರಿತು ಈ ಭಾಗದಲ್ಲಿ ಎಚ್ಚರಿಕೆಯನ್ನು ಪೊಲೀಸರು ರವಾನಿಸಿದ್ದಾರೆ. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ದೆಹಲಿ ಅಗ್ನಿಶಾಮಕ ಸೇವೆಗೆ ಅಪರಿಚಿತರೊಬ್ಬರು ಕರೆ ಮಾಡಿ, ಸ್ಫೋಟದ ಬಗ್ಗೆ ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
#WATCH | Delhi Police Crime Unit team and forensics team near the Israel Embassy in Delhi to hold a probe after a call was received about a blast today evening pic.twitter.com/nJjDlIWZsF
— ANI (@ANI) December 26, 2023
ಇಸ್ರೇಲ್ ರಾಯಭಾರ ಕಚೇರಿಯ ಹಿಂಬದಿಯ ಖಾಲಿ ನಿವೇಶನದಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಪರಿಚಿತ ವ್ಯಕ್ತಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ದಿಲ್ಲಿ ಪೊಲೀಸ್‍ನ ಸ್ಪೇಷಲ್ ಸೆಲ್ ತಂಡವು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿತು. ಆದರೆ, ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.
ಸ್ಫೋಟದ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಸ್ಫೋಟದ ಸದ್ದು ತುಂಬಾ ಜೋರಾಗಿತ್ತು ಎಂದು ಹೇಳಿದ್ದಾರೆ. ಸ್ಫೋಟವು ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ, ನಾನು ನನ್ನ ಡ್ಯೂಟಿಯಲ್ಲಿದ್ದಾಗ ದೊಡ್ಡ ಶಬ್ದ ಕೇಳಿದೆ, ನಾನು ಹೊರಗೆ ಬಂದಾಗ, ಮರದ ತುದಿಯಿಂದ ಹೊಗೆ ಬರುತ್ತಿರುವುದನ್ನು ನಾನು ನೋಡಿದೆ. ಈ ಕುರಿತು ಪೊಲೀಸರು ತನ್ನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Threat e mail: ಆರ್‌ಬಿಐ ಗವರ್ನರ್, ವಿತ್ತ ಸಚಿವೆಯಿಂದ ಭಾರೀ ಹಗರಣ! ರಾಜೀನಾಮೆ ನೀಡಬೇಕು, ಇಲ್ಲದಿದ್ರೆ ಬಾಂಬ್ ಸ್ಫೋಟ