Site icon Vistara News

Viral Video | ವಿಮಾನದಲ್ಲಿ ಸಿಗರೇಟ್​ ಸೇದುತ್ತ​ ಪೋಸ್​​ ಕೊಟ್ಟು, ಡಮ್ಮಿ ಎಂದ ಬಾಬಿ ಕಟಾರಿಯಾ !

Bobby Kataria Smoke in Plane Video Viral

ನವ ದೆಹಲಿ: ಹರ್ಯಾಣ ಮೂಲದ ಬಾಡಿಬಿಲ್ಡರ್​​, ಸೋಷಿಯಲ್ ಮೀಡಿಯಾ ಸ್ಟಾರ್​ ಬಾಬಿ ಕಟಾರಿಯಾ ಸ್ಪೈಸ್​ ಜೆಟ್​ ವಿಮಾನದಲ್ಲಿ ಕುಳಿತು ಸಿಗರೇಟ್​ ಸೇದುತ್ತಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಬಾಬಿ ಕಟಾರಿಯಾ ಸಿಗರೇಟ್​ ಸೇದುತ್ತ ಉದ್ಧಟತನದ ಪೋಸ್​ ಕೊಟ್ಟ ವಿಡಿಯೋದ ಬಗ್ಗೆ ಕೇಂದ್ರ ವಿಮಾನಯಾನ ಇಲಾಖೆ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ, ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.

ವಿಮಾನದಲ್ಲಿ ಧೂಮಪಾನ ಮಾಡುವಂತಿಲ್ಲ. 1937ರ ಏರ್​​ಕ್ರಾಫ್ಟ್​​ ನಿಯಮದಡಿ ಸ್ಮೋಕಿಂಗ್​ನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಎಷ್ಟೋ ಜನರಿಗೆ ಸರಿಯಾಗಿ ಅರಿವು ಇಲ್ಲದೆ, ಏರ್​ಪೋರ್ಟ್​​ಗೆ ಸಿಗರೇಟ್​ ತೆಗೆದುಕೊಂಡು ಹೋದರೆ ಅವರಿಗೆ ವಿಮಾನ ಹತ್ತಲು ಪ್ರವೇಶ ಕೊಡುವುದಿಲ್ಲ ಅಥವಾ ಸಿಗರೇಟ್​ನ್ನು ವಶಪಡಿಸಿಕೊಳ್ಳಲಾಗುತ್ತದೆ. ಇಷ್ಟೆಲ್ಲ ಕಠಿಣ ನಿಯಮಗಳು ಇದ್ದಾಗ್ಯೂ ಬಾಬಿ ಕಟಾರಿಯಾ ವಿಮಾನದ ಮೇಲೆ ಧೂಮಪಾನ ಮಾಡಿದ್ದು ಹೇಗೆ? ಅವರಿಗೆ ಸಿಗರೇಟ್ ಕೊಂಡೊಯ್ಯಲು ಅವಕಾಶ ಕೊಟ್ಟಿದ್ಯಾರು? ಎಂಬಿತ್ಯಾದಿ ವಿಚಾರಗಳ ತನಿಖೆ ನಡೆಯಲಿದೆ.

ಈ ಬಾಬಿ ಕಟಾರಿಯಾ ವಿಮಾನದ ಹಿಂಭಾಗದಲ್ಲಿರುವ ಒಂದು ಸೀಟ್​​ನಲ್ಲಿ, ಒಂದು ಕಾಲ ಮೇಲೆ, ಇನ್ನೊಂದು ಕಾಲು ಹಾಕಿ ಮಲಗಿ, ತುಂಬ ಸ್ಟೈಲೀಶ್​ ಆಗಿ ಸಿಗರೇಟ್​ ಹಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋವನ್ನು ಅನೇಕರು ಶೇರ್​ ಮಾಡಿಕೊಂಡು, ‘ಬಾಬಿ ಕಟಾರಿಯಾಗೆ ಹೊಸ ರೂಲ್ಸಾ? ಅವರಿಗೆ ಧೂಮಪಾನ ನಿಷೇಧ ಅನ್ವಯ ಆಗುವುದಿಲ್ಲವಾ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಸ್ಪೈಸ್ ಜೆಟ್​ ಹೇಳೋದೇನು?
ಬಾಬಿ ಕಟಾರಿಯಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪೈಸ್​ ಜೆಟ್​ ವಿಮಾನಯಾನ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಈ ವಿಡಿಯೋ ಈಗಿನದ್ದಲ್ಲ. ಮೊಟ್ಟಮೊದಲು ನಮ್ಮ ಗಮನಕ್ಕೆ ಬಂದಿದ್ದು 2022ರ ಜನವರಿಯಲ್ಲಿ. ಆಗಲೇ ನಾವು ಗುರ್​ಗಾಂವ್​ನ ಉದ್ಯೋಗ ವಿಹಾರ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಜನವರಿ 20ರಂದು ದುಬೈನಿಂದ ದೆಹಲಿಗೆ ಆಗಮಿಸಿದ ವಿಮಾನದ 21ನೇ ಸಾಲಿನ ಸೀಟ್​​ನಲ್ಲಿ ಬಾಬಿ ಕಟಾರಿಯಾ ಸಿಗರೇಟ್​ ಸೇದಿದ್ದಾರೆ ಎಂಬುದು ಗೊತ್ತಾಗಿದೆ. ಅಂದು ಬೇರೆ ಯಾವುದೇ ಪ್ರಯಾಣಿಕರಿಗಾಗಲೀ, ವಿಮಾನದ ಸಿಬ್ಬಂದಿಗಾಗಲೀ ಗಮನಕ್ಕೆ ಬಂದಿರಲಿಲ್ಲ ಎಂಬುದು ಪ್ರಾಥಮಿಕವಾಗಿ ಗೊತ್ತಾಗಿದೆ. ಇನ್ನಷ್ಟು ಆಳವಾದ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದೆ.

ಕಟಾರಿಯಾ ಹೇಳಿದ್ದೇನು?
ತಾವು ವಿಮಾನದಲ್ಲಿ ಸ್ಮೋಕ್​ ಮಾಡಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಾಬಿ ಕಟಾರಿಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನನಗೆ ನೆನಪಿರುವಂತೆ 2019ರಲ್ಲೋ, 2020ರಲ್ಲೋ ಚಿತ್ರೀಕರಣವಾದ ವಿಡಿಯೋ. ಮುಖ್ಯವಾಗಿ ಇದು ನಿಜವಾದ ವಿಮಾನ ಆಗಿರಲೇ ಇಲ್ಲ. ಅದೊಂದು ಡಮ್ಮಿ ಪ್ಲೇನ್​ ಆಗಿತ್ತು. ನನ್ನ ಬಯೋಪಿಕ್​​ ಚಿತ್ರೀಕರಣದ ಒಂದು ಭಾಗವಷ್ಟೇ’ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಈ ಚಿತ್ರೀಕರಣ ನಡೆದಿದ್ದು ದುಬೈನಲ್ಲಿ. ವಿಮಾನದಲ್ಲಿ ಇದ್ದವರೆಲ್ಲ ಶೂಟಿಂಗ್​​ನಲ್ಲಿ ಪಾಲ್ಗೊಂಡವರೇ ಆಗಿದ್ದರು. ನನ್ನ ಬಯೋಪಿಕ್​ ಶೂಟಿಂಗ್ 2019ರಲ್ಲೇ ಪ್ರಾರಂಭವಾಗಿದ್ದು, 2024ರಲ್ಲಿ ಮುಕ್ತಾಯ ಆಗಲಿದೆ. ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡವರು ಒಂದು ಮಾತು ನನ್ನ ಬಳಿ ಕೇಳಿದ್ದರೆ ಸಾಕಿತ್ತು, ನಾನೇ ಎಲ್ಲವನ್ನೂ ವಿವರಿಸುತ್ತಿದ್ದೆ. ಆದರೆ ಎಲ್ಲರಿಗೂ ಟಿಆರ್​ಪಿ, ಜನಪ್ರಿಯತೆಯೇ ಬೇಕು. ವಿಮಾನದಲ್ಲಿ ಲೈಟರ್​ ಹಚ್ಚಲು ಸಾಧ್ಯವೇ ಎಂದು ನಾನೇ ಕೇಳುತ್ತೇನೆ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸ್ಪೈಸ್‌ ಜೆಟ್‌ ವಿಮಾನಗಳಿಗೆ ಆಕಾಶ ದೋಷ!; ಮಾರ್ಗ ಮಧ್ಯೆ ಬಿರುಕುಬಿಟ್ಟ ವಿಂಡ್‌ ಶೀಲ್ಡ್‌

Exit mobile version