ನವದೆಹಲಿ: ದೇಶದಲ್ಲಿ ಹುಸಿಬಾಂಬ್ ಬೆದರಿಕೆ ಕರೆಗಳು ಆಗಾಗ ಬರುತ್ತಿವೆ. ಶಾಲೆ, ವಿಮಾನಗಳಿಗೆ ಎರಡು ದಿನಕ್ಕೊಂದರಂತೆ ಬಾಂಬ್ ಬೆದರಿಕೆ ಕರೆಗಳ(Bomb Threat) ಬರುತ್ತಲೇ ಇವೆ. ಇದೀಗ ಮತ್ತೆ ಅಂತಹ ಕರೆ ಬಂದಿದ್ದು, ದಿಲ್ಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ವಿಸ್ತಾರ ವಿಮಾನ(Vistara Flight)ಕ್ಕೆ ಹುಸಿಬಾಂಬ್ ಕರೆ ಬಂದ ಹಿನ್ನೆಲೆ ತುರ್ತು ಲ್ಯಾಂಡಿಂಗ್(Emergency Landing) ಮಾಡಲಾಗಿದೆ. ಒಂದು ಪುಟ್ಟ ಮಗು ಸೇರಿದಂತೆ ಬರೋಬ್ಬರಿ 177 ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 12:10ಗೆ ದಿಲ್ಲಿ ವಿಮಾನ ನಿಲ್ದಾಣದಿಂದ ವಿಸ್ತಾರ UK611 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಈ ಕರೆ ಶ್ರೀನಗರದ ಏರ್ ಟ್ರಾಫಿಕ್ ಕಂಟ್ರೋಲ್(ATC)ಗೆ ಬಂದಿದ್ದ ಹಿನ್ನೆಲೆ ತಕ್ಷಣ ಆ ವಿಮಾನವನ್ನು ಪ್ರತ್ಯೇಕವಾಗಿ ಲ್ಯಾಂಡಿಂಗ್ ಮಾಡಿಸಲಾಗಿತ್ತು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಸಲಾಗಿದ್ದು, ಏರ್‌ಪೋರ್ಟ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳವೂ ದೌಡಾಯಿಸಿ ಪರಿಶೀಲನೆ ನಡೆಸಿದೆ. ಯಾವುದೇ ಬಾಂಬ್, ಸ್ಫೋಟಕ ವಸ್ತುಗಳು ಪರಿಶೀಲನೆ ವೇಳೆ ಪತ್ತೆ ಆಗಿಲ್ಲ.
ನಿನ್ನೆಯಷ್ಟೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅನಾಮಿಕ ವ್ಯಕ್ತಿಯೊಬ್ಬ ಏರ್‌ಪೋರ್ಟ್‌ನ ಬಾತ್ ರೂಮ್‌ನ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಏರ್‌ಪೋರ್ಟ್‌ನ ಅಲ್ಪಾ 2ರ ಆಡಳಿತ ಕಚೇರಿಯ ಬಾತ್ ರೂಮ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಬರೆದಿದ್ದ. ತಕ್ಷಣ ಶ್ವಾನದಳ, ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಸಂದೇಶ ಅಂತ ಗೊತ್ತಾಗಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗೆ ಪದೇಪದೆ ಕೆಲ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಗೋ ಏರ್‌ಲೈನ್ಸ್‌ನ 6E2211 ವಿಮಾನಕ್ಕೆ ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇನ್ನೇನು ಟೇಕ್ ಆಫ್ ಆಗಬೇಕಾಗಿದ್ದ ವಿಮಾನವನ್ನು ಪ್ರತ್ಯೇಕ ರನ್ ವೇ ಒಯ್ದು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎಲ್ಲ ಪ್ರಯಾಣಿಕರನ್ನು ಎಮರ್ಜೆನ್ಸಿ ಎಕ್ಸಿಟ್ ಬಾಗಿಲಿನಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲಾಗಿದೆ. ಇನ್ನು ಬೆಳಗ್ಗೆ 5:35ಕ್ಕೆ ಹೊರಡಬೇಕಾಗಿದ್ದ ವಿಮಾನ ಇದಾಗಿತ್ತು ಎನ್ನಲಾಗಿದೆ.
ಮುಂಬೈನ ಮುಂಬೈನಲ್ಲಿರುವ ತಾಜ್ ಹೋಟೆಲ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಮುಂಬೈ ಪೊಲೀಸರಿಗೆ ಕೆಲವು ದಿನಗಳ ಹಿಂದೆ ಬೆದರಿಕೆ ಕರೆ ಬಂದಿತ್ತು. ಹಾಗಾಗಿ, ಮುಂಬೈ ತಾಜ್ ಹೋಟೆಲ್ ಹಾಗೂ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Contractor Self Harming: ಕಂಟ್ರಾಕ್ಟರ್ ಆತ್ಮಹತ್ಯೆ ಇಲಾಖಾ ತನಿಖೆಗೆ ಸಚಿವ ಪ್ರಿಯಾಂಕ್ ಖರ್ಗೆ ಆದೇಶ