ಚೆನ್ನೈ: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe)ಯಲ್ಲಿ ಬಾಂಬ್ ಸ್ಫೋಟ (Blast in Bengaluru) ಸಂಭವಿಸಿದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು ಆತಂಕ ಮೂಡಿಸಿದೆ (Bomb Threat). ಕೊಯಮತ್ತೂರಿನ ಪಿಎಸ್ ಬಿಬಿ ಮಿಲೇನಿಯಮ್ (PSBB Millennium School) ಮತ್ತು ಕಾಂಚೀಪುರಂ ಜಿಲ್ಲೆಯ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತು ಕಂಡು ಬಂದಿಲ್ಲ.
ಘಟನೆಯ ವಿವರ
ಪಿಎಸ್ ಬಿಬಿ ಮಿಲೇನಿಯಂ ಶಾಲೆಗೆ ಭಾನುವಾರ (ಮಾರ್ಚ್ 3) ರಾತ್ರಿ ಬಾಂಬ್ ಬೆದರಿಕೆಯ ಇ ಮೇಲ್ ಬಂದಿದ್ದರೆ, ಸೋಮವಾರ (ಇಂದು) ಬೆಳಗ್ಗೆ ಎರಡನೇ ಶಾಲೆಗೆ ಬೆದರಿಕೆ ಕರೆ ಬಂದಿದೆ. ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಶಾಲೆಗಳಿಗೆ ತೆರಳಿ ತನಿಖೆ ಪ್ರಾರಂಭಿಸಿದರು. ಆದರೆ ಯಾವುದೇ ಸ್ಫೋಟಕ ಕಂಡು ಬಂದಿಲ್ಲ. ಹೀಗಾಗಿ ಇದೊಂದು ಹುಸಿ ಕರೆ ಎಂದು ಅಧಿಕಾರಿಗಳು ನಿರ್ಧರಿಸಿದ್ದು, ಇಮೇಲ್ ಕಳುಹಿಸಿದ ಮತ್ತು ಸುಳ್ಳು ಕರೆ ಮಾಡಿದವರನ್ನು ಪತ್ತೆ ಹಚ್ಚಲು ತನಿಖೆ ಪ್ರಾರಂಭಿಸಲಾಗಿದೆ.
ಸದ್ಯ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಪೊಲೀಸರು ಶಾಲೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಕೂಲಂಕುಷವಾಗಿ ಪರಿಶೀಲಿಸದೆ ಯಾರನ್ನೂ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ.
ಕಳೆದ ತಿಂಗಳೂ ಬಾಂಬ್ ಬೆದರಿಕೆ ಕರೆ ಬಂದಿತ್ತು
ತಿಂಗಳ ಅಂತರದಲ್ಲಿ ತಮಿಳುನಾಡಿನ ಶಾಲೆಗಳು ಬಾಂಬ್ ಬೆದರಿಕೆ ಕರೆ ಸ್ವೀಕರಿಸುವುದು ಇದು ಎರಡನೇ ಬಾರಿ. ಫೆಬ್ರವರಿ 8ರಂದು ಗ್ರೇಟರ್ ಚೆನ್ನೈ ಪೊಲೀಸ್ ವ್ಯಾಪ್ತಿಯ 13 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಪ್ಯಾರಿಸ್ ಕಾರ್ನರ್, ಅಣ್ಣಾ ನಗರ, ಗೋಪಾಲಪುರಂ, ರಾಜಾ ಅಣ್ಣಾಮಲೈಪುರಂ, ನಂದಂಬಕ್ಕಂ ಮತ್ತು ರಾಯಪೆಟ್ಟಾದ ಶಾಲೆಗಳಿಗೆ ಈ ಬೆದರಿಕೆ ಬಂದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾಗಿದ್ದ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಎಲ್ಲ ಶಾಲೆಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ಯಾವುದೇ ಬಾಂಬ್ ಕಂಡು ಬಂದಿರಲಿಲ್ಲ. ನಂತರ ಪೊಲೀಸರು ಇವು ಹುಸಿ ಇಮೇಲ್ ಎಂದು ನಿರ್ಧರಿಸಿ ತನಿಖೆ ಆರಂಭಿಸಿದ್ದರು.
ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಾಮ್ಯತೆ ಇದೆಯೇ ?
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿ 70 ಗಂಟೆಗಳೇ ಕಳೆದಿವೆ. ರಾಜ್ಯ ಪೊಲೀಸರ ಹಲವಾರು ತಂಡಗಳು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲ ದಿಕ್ಕುಗಳಲ್ಲೂ ತನಿಖೆ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಇದನ್ನೂ ಓದಿ: Blast In Bangalore : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಎನ್ಐಎಗೆ
ಇದರ ನಡುವೆ ಮಾರ್ಚ್ 1ರಂದು ಮಧ್ಯಾಹ್ನ 12.55ರ ಹೊತ್ತಿಗೆ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೂ 2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಏನಾದರೂ ಸ್ವಾಮ್ಯತೆ ಇದೆಯೇ ಎನ್ನುವ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೂ ಪೊಲೀಸರು ಈ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ