Site icon Vistara News

Rane Bungalow | ಕೇಂದ್ರ ಸಚಿವ ರಾಣೆಗೆ ಸೇರಿದ ಬಂಗ್ಲೆ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ಆದೇಶ

Narayan Rane

ಮುಂಬೈ: ಇಲ್ಲಿನ ಜೂಹು ಪ್ರದೇಶದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ (Narayan Rane) ಅವರ ಬಂಗ್ಲೆಯಲ್ಲಿ ನಿಯಮ ಮೀರಿ ನಿರ್ಮಾಣ ಮಾಡಲಾಗಿರುವ ಅನಧಿಕೃತ ಭಾಗವನ್ನು ನೆಲಸಮ ಮಾಡುವಂತೆ ಬಾಂಬೆ ಹೈಕೋರ್ಟ್, ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಗೆ ನಿರ್ದೇಶನ ನೀಡಿದೆ. ಕೋಸ್ಟಲ್ ರೆಗ್ಯುಲೇಷನ್ ಝೋನ್(ಸಿಆರ್‌ಜೆಡ್) ಮತ್ತು ಫ್ಲೋರ್ ಸ್ಪೇಸ್ ಇಂಡೆಕ್ಸ್(ಎಫ್ಎಸ್ಐ) ನಿಯಮಗಳನ್ನು ಮೀರಿ ಅನಧಿಕೃತ ಬಂಗ್ಲೆಯ ಒಂದು ಭಾಗವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಜತೆಗೆ, 10 ಲಕ್ಷ ರೂ.ವೆಚ್ಚವನ್ನೂ ಭರಿಸವಂತೆಯೂ ಕೋರ್ಟ್ ತಿಳಿಸಿದೆ.

ಜಸ್ಟೀಸ್ ಆರ್ ಡಿ ಧನುಕಾ ಮತ್ತು ಕಮಲ್ ಖಾತಾ ಅವರಿದ್ದ ಪೀಠವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೆ ಫ್ಯಾಮಿಲಿ ಒಡೆತನದ ಕಂಪನಿಯು ಸಲ್ಲಿಸಿರುವ ಎರಡನೇ ಮನವಿಗೆ ಅವಕಾಶ ನೀಡಬಾರದು ಎಂದು ತಿಳಿಸಿದೆ. ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಭಾಗವನ್ನು ಅಧಿಕೃತಗೊಳಿಸಲು ಅವಕಾಶ ಕಲ್ಪಿಸಬೇಕೆಂದು ರಾಣೆ ಒಡೆತನದ ಕಂಪನಿಯು ಎರಡನೇ ಬಾರಿಗೆ ಮನವಿ ಸಲ್ಲಿಸಿದೆ. ಈ ಮನವಿಯನ್ನು ಪರಿಗಣಿಸಿದರೆ, ಇಡೀ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಾಣ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಪೀಠ ಹೇಳಿದೆ.

ಮುಂದಿನ ಎರಡು ವಾರಗಳಲ್ಲಿ ರಾಣೆ ಅವರ ಬಂಗ್ಲೆಯ ಅನಧಿಕೃತ ಭಾಗವನ್ನು ನೆಲಸಮಗೊಳಿಸಿ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಜತೆಗೆ, 10 ಲಕ್ಷ ರೂ. ವೆಚ್ಚವನ್ನು ಭರಿಸುವಂತೆಯೂ ಸೂಚಿಸಿದೆ. ಈ ಹಣವನ್ನು ಮಹಾರಾಷ್ಟ್ರ ಸ್ಟೇಟ್ ಲೀಗಲ್ ಸರ್ವೀಸ್ ಅಥಾರಿಟಿಗೆ ಎರಡು ವಾರಗಳಲ್ಲಿ ಕಟ್ಟುವಂತೆ ತಿಳಿಸಿದೆ.

ಏತನ್ಮಧ್ಯೆ, ಹೈಕೋರ್ಟ್ ತಾನು ನೀಡಿದ ಆದೇಶಕ್ಕೆ 6 ವಾರಗಳ ಕಾಲ ತಡೆಯಾಜ್ಞೆ ನೀಡಬೇಕು. ಹೀಗೆ ಮಾಡಿದರೆ, ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ರಾಣೆ ಪರ ವಕೀಲ ತಿಳಿಸಿದರು. ಆದರೆ, ಹೈಕೋರ್ಟ್ ಈ ಮನವಿಯನ್ನು ತಳ್ಳಿ ಹಾಕಿತು.

ಇದನ್ನೂ ಓದಿ | ವರವರ ರಾವ್‌ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್‌

Exit mobile version