Site icon Vistara News

Bombay High Court: ಎಲ್ಗಾರ್ ಪರಿಷತ್ ಕೇಸ್; ಗೌತಮ್ ನವಲಖಾ‌ಗೆ ಬಾಂಬೆ ಹೈಕೋರ್ಟ್ ಜಾಮೀನು

Bombay High Court gave bail to gautam navlakha accused in Elgar Parishad-Maoist links case

ಮುಂಬೈ: 2018ರಲ್ಲಿ ಎಲ್ಗಾರ್ ಪರಿಷತ್-ಮಾವೋದಿ ಸಂಪರ್ಕ ಪ್ರಕರಣ ಸಂಬಂಧ (Elgar Parishad-Maoist links case) ಜೈಲು ಪಾಲಾಗಿದ್ದ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಗೌತಮ್ ನವಲಖಾ (activist Gautam Navlakha) ಅವರಿಗೆ ಬಾಂಬೆ ಹೈಕೋರ್ಟ್ (Bombay High Court) ಮಂಗಳವಾರ ಜಾಮೀನು (bail) ನೀಡಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರು ಕಳೆದ ವರ್ಷದಿಂದ ಗೃಹ ಬಂಧನದಲ್ಲಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ ರಾಷ್ಟ್ರೀಯ ತನಿಖಾ ಸಂಸ್ಥೆ(NIA), ಆರು ವಾರಗಳ ಕಾಲ ಆದೇಶವನ್ನು ಅಮಾನತ್ತಿನಲ್ಲಿಡುವಂತೆ ಕೇಳಿಕೊಂಡಿತು. ಆರು ವಾರಗಳ ಬದಲಿಗೆ ಬಾಂಬೆ ಹೈಕೋರ್ಟ್ ಮೂರು ವಾರಗಳ ಅವಕಾಶವನ್ನು ನೀಡಿದೆ.

2018ರಲ್ಲಿ ಗೌತಮ್ ನವಲಖಾ ಅವರನ್ನು ಬಂಧಿಸಲಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಕಳೆದ ವರ್ಷ ನವೆಂಬರ್‌ ತಿಂಗಳಿಂದ ನವಿ ಮುಂಬೈನಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು. 1 ಲಕ್ಷದ ಜಾಮೀನು ಮೇರೆಗೆ ಬಾಂಬೆ ಹೈಕೋರ್ಟ್ ನವಲಖಾ ಅವರಿಗೆ ಬೇಲ್ ನೀಡಿದೆ. ಗೌತಮ್ ನವಲಖಾ ಎಲ್ಗಾರ್ ಪರಿಷತ್- ಮಾವೋವಾದಿ ಸಂಪರ್ಕ ಪ್ರಕರಣ ಸಂಬಂಧ ಬೇಲ್ ಪಡೆದ 7ನೇ ಆರೋಪಿಯಾಗಿದ್ದಾರೆ.

ನಿಷೇಧಿತ ಮಾವೋದವಾ ಸಿಪಿಐ ಜತೆ ಮೇಲ್ನೋಟಕ್ಕೆ ಸಂಪರ್ಕ ಹೊಂದಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಗೌತಮ್ ಅವರಿಗೆ ಜಾಮೀನು ನೀಡಲು ವಿಶೇಷ ನ್ಯಾಯಾಲಯವು ನಿರಾಕರಿಸಿತ್ತು. ಈ ಕುರಿತು ನವಲಖಾ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ತನಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯವು ತಪ್ಪೆಸಗಿದೆ ಎಂದು ನವಲಖಾ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ತಿಳಿಸಿದ್ದರು. ನಿಯಮಿತ ಜಾಮೀನು ಕೋರಿ ನವಲಖಾ ಅವರು ಹೈಕೋರ್ಟ್‌ನಲ್ಲಿ ಎರಡನೇ ಸುತ್ತಿನ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯವು ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ನವಲಖಾ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ: ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

ಜಾಮೀನು ವಿರೋಧಿಸಿದ್ದ ಎನ್ಐಎ, ನವಲಖಾ ನೇಮಕಾತಿಗಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜನರಲ್‌ಗೆ ಅವರನ್ನು ಪರಿಚಯಿಸಲಾಗಿದೆ ಎಂದು ಪ್ರತಿಪಾದಿಸಿತ್ತು. ಇದು ಅವರು ಸಂಘಟನೆಯೊಂದಿಗೆ ನಂಟನ್ನು ತೋರಿಸುತ್ತದೆ. ಆದಾಗ್ಯೂ, ವಿಶೇಷ ನ್ಯಾಯಾಲಯದ ಆದೇಶದಲ್ಲಿನ ತರ್ಕವು ನಿಗೂಢವಾಗಿದೆ ಮತ್ತು ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ಅವಲಂಬಿಸಿರುವ ಸಾಕ್ಷ್ಯಗಳ ವಿಶ್ಲೇಷಣೆಯನ್ನು ಒಳಗೊಂಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯವು ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಪ್ರಕರಣವನ್ನು ಮತ್ತೆ ನ್ಯಾಯಾಲಯಕ್ಕೆ ಹಿಂತಿರುಗಿಸಿತ್ತು. ಅಲ್ಲದೆ ನಾಲ್ಕು ವಾರಗಳಲ್ಲಿ ವಿಚಾರಣೆ ಮುಗಿಸುವಂತೆ ವಿಶೇಷ ನ್ಯಾಯಾಧೀಶರಿಗೆ ಸೂಚಿಸಿತ್ತು. ಬಳಿಕ, ವಿಶೇಷ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸಿ, ಜಾಮೀನು ನಿರಾಕರಿಸಿತ್ತು.

ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ

Exit mobile version