ಇಂದೋರ್: ನಾನ್ವೆಜ್ ಪ್ರಿಯರು ಹೇಗೆ ಬಿರ್ಯಾನಿಯನ್ನು ವಿಶೇಷವಾಗಿ ಇಷ್ಟಪಟ್ಟು ತಿನ್ನುತ್ತಾರೋ, ಹಾಗೇ, ಮಾಂಸಾಹಾರ ಮುಟ್ಟದವರು, ವೆಜ್ ಬಿರ್ಯಾನಿಯನ್ನು ಅಷ್ಟೇ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಮಧ್ಯಪ್ರದೇಶದ ಇಂದೋರ್ನಲ್ಲಿ ಗ್ರಾಹಕರೊಬ್ಬರಿಗೆ ಈ ವೆಜ್ ಬಿರ್ಯಾನಿ ವಿಷಯದಲ್ಲಿ ಕೆಟ್ಟ ಅನುಭವ ಆಗಿದೆ. ರೆಸ್ಟೋರೆಂಟ್ನಿಂದ ತರಕಾರಿ ಬಿರ್ಯಾನಿ ಆರ್ಡರ್ ಮಾಡಿದ ಆಕಾಶ್ ದುಬೆ ಎಂಬುವರಿಗೆ ಅದರಲ್ಲಿ ಮೂಳೆ ಸಿಕ್ಕಿದೆ.
ಆಕಾಶ್ ದುಬೆ ಅವರು ಇಂದೋರ್ನ ಶಾಲಿಮಾರ್ ಸ್ವಯಂನ ನಿವಾಸಿ. ಅವರು ಅಲ್ಲಿನ ವಿಜಯ ನಗರ ಏರಿಯಾದಲ್ಲಿರುವ ರೆಸ್ಟೋರೆಂಟ್ವೊಂದರಿಂದ ಆನ್ಲೈನ್ನಲ್ಲಿ ವೆಜ್ ಬಿರ್ಯಾನಿ ಆರ್ಡರ್ ಮಾಡಿದ್ದರು. ಮನೆಗೆ ಬಂದ ಬಿರ್ಯಾನಿ ನೋಡಿದಾಗ ಅದರಲ್ಲಿ ಮೂಳೆ ನೋಡಿ ಆಕಾಶ್ ದುಬೆ ಶಾಕ್ ಆಗಿದ್ದಾರೆ. ನಾನ್ವೆಜ್ ತಿನ್ನದ ಅವರಿಗೆ ಈ ಬಿರ್ಯಾನಿಯಿಂದ ತುಂಬ ಕಸಿವಿಸಿ ಆಯಿತು ಎಂದು ಹೇಳಿಕೊಂಡಿದ್ದಾರೆ.
ಆಕಾಶ್ ದುಬೆ ಮೊದಲು ರೆಸ್ಟೋರೆಂಟ್ ಮ್ಯಾನೇಜರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಮ್ಯಾನೇಜರ್ ಕ್ಷಮಾಪಣೆ ಕೇಳಿದ್ದಾರೆ. ಆದರೆ ಆಕಾಶ್ ಅಷ್ಟಕ್ಕೇ ಸುಮ್ಮನಾಗದೆ, ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಪುರುಷರಲ್ಲಿ ಬಿರ್ಯಾನಿ ಲೈಂಗಿಕ ಆಸಕ್ತಿ ಕುಗ್ಗಿಸುತ್ತಿದೆ ಎಂಬ ಆರೋಪ; ಎರಡು ಅಂಗಡಿಗಳನ್ನು ಮುಚ್ಚಿಸಿದ ಟಿಎಂಸಿ ನಾಯಕ!