ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (BSF Jawan) ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಪತ್ನಿಯು ಆತ್ಮಹತ್ಯೆ (Suicide) ಮಾಡಿಕೊಂಡ ಸುದ್ದಿ ತಿಳಿದ ಯೋಧ ರಾಜೇಂದ್ರ ಯಾದವ್ (28) (Rajendra Yadav), ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆ ಧೀರ್‌ಪುರ ಗ್ರಾಮದಲ್ಲಿ ರಾಜೇಂದ್ರ ಯಾದ್ ಪತ್ನಿ ಅನ್ಶು ಯಾದವ್ (24) ಅವರು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿಯುತ್ತಲೇ ರಾಜೇಂದ್ರ ಯಾದವ್ ಅವರು ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿ ಆತ್ಮಹತ್ಯೆಗೆ ಕಾರಣವೇನು?
ರಾಜೇಂದ್ರ ಯಾದವ್ ಹಾಗೂ ಅನ್ಶು ಯಾದವ್ ಮಧ್ಯೆ ಕೆಲ ದಿನಗಳಿಂದ ಸಣ್ಣಪುಟ್ಟ ವಿಷಯಕ್ಕೂ ಜಗಳ ಆಗುತ್ತಿತ್ತು. ಇಬ್ಬರೂ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಫೋನ್‌ನಲ್ಲಿ ಮಾತನಾಡುವಾಗ ಆಗಾಗ ಜಗಳ ಆಡುತ್ತಿದ್ದರು. ಆದರೆ, ಇತ್ತೀಚೆಗೆ ರಾಜೇಂದ್ರ ಯಾದವ್ ಅವರು ಕೋಪದಲ್ಲಿ ಬೈದ ಕಾರಣ ಇಬ್ಬರ ಜಗಳ ತಾರಕಕ್ಕೇರಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ಅನ್ಶು ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅನ್ಶು ಯಾದವ್ ಅವರ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ರಾಜೇಂದ್ರ ಯಾದವ್ ಅವರ ಶವವನ್ನು ಗುರುವಾರ (ಅಕ್ಟೋಬರ್ 19) ಜೈಪುರಕ್ಕೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Suicide | 2ನೇ ಮದುವೆ ರದ್ದು; ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ
ಕೆಲ ದಿನಗಳ ಹಿಂದಷ್ಟೇ ಅಗ್ನಿವೀರ, ಪಂಜಾಬ್‌ನ ಅಮೃತ್‌ಪಾಲ್ ಸಿಂಗ್ ಅವರು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆ ಸೇನೆಯು ಗೌರವ ನೀಡಿಲ್ಲ ಎಂಬ ಆರೋಪಗಳು ಕೂಡ ಕೇಳಿಬಂದಿದ್ದವು. ಇದಾದ ಬಳಿಕ ಸೇನೆಯು ಸ್ಪಷ್ಟನೆ ನೀಡಿತ್ತು.
“ಅಗ್ನಿವೀರ ಅಮೃತ್‌ಪಾಲ್ ಸಿಂಗ್ ಅವರು ಡ್ಯೂಟಿಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡುರುವುದು ಬೇಸರದ ಸಂಗತಿ. ಅವರ ಅಗಲಿಕೆಯಿಂದ ಭಾರತೀಯ ಸೇನೆಗೆ ನಷ್ಟವಾಗಿದೆ. ಆದರೆ, ಅವರಿಗೆ ಸೇನೆಯ ಗೌರವದ ಕುರಿತು ಜನರಲ್ಲಿ ಗೊಂದಲ ಮೂಡಿದೆ. ಅಮೃತ್‌ಪಾಲ್ ಸಿಂಗ್ ಅವರ ಶವವನ್ನು ಸೇನೆಯ ವಾಹನದಲ್ಲಿಯೇ ಅವರ ಹುಟ್ಟೂರಿಗೆ ಕಳುಹಿಸಲಾಗಿದೆ. ಅವರು ಸೇವೆಯಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾರಣ ಸೇನೆಯಿಂದ ಗೌರವ ಸಲ್ಲಿಸಿಲ್ಲ” ಎಂಬುದಾಗಿ ಭಾರತೀಯ ಸೇನೆಯು ಭಾನುವಾರ (ಅಕ್ಟೋಬರ್ 15) ರಾತ್ರಿ ಸ್ಪಷ್ಟನೆ ನೀಡಿತ್ತು.