ಭೋಪಾಲ್: ಆತನೊಬ್ಬ ಪುಟ್ಟ ಹುಡುಗ.ಅವನಿಗಿನ್ನೂ ಎಂಟು ವರ್ಷವಷ್ಟೇ. ರಸ್ತೆ ಪಕ್ಕ ಗೋಡೆಗೊರಗಿ ಕುಳಿತಿದ್ದಾನೆ. ಅವನ ಮಡಿಲಲ್ಲಿ ಎರಡು ವರ್ಷದ ಗಂಡುಮಗುವೊಂದರ ಶವ ಇದೆ. ಈ ಬಾಲಕ ಆ ಶವವನ್ನೇ ನೋಡುತ್ತ, ತಲೆ ಬಗ್ಗಿಸಿ ಕುಳಿತಿದ್ದಾನೆ..ಉಸಿರು ನಿಲ್ಲಿಸಿ ಮಲಗಿದ ತಮ್ಮನನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಅಲ್ಲೇ ಸ್ವಲ್ಪ ದೂರದಲ್ಲಿ ಈ ಮಕ್ಕಳ ತಂದೆ ಪೂಜಾರಾಮ್ ಜಾತವ್ ಎಂಬುವರು ನಿಂತು ಯಾವುದಾದರೂ ವಾಹನ ಅಥವಾ ಆಂಬುಲೆನ್ಸ್ ಸಿಗಬಹುದೇನೋ ಎಂದು ಕಾಯುತ್ತಿದ್ದಾರೆ. ಇದೊಂದು ಮನಕಲಕುವ ಸನ್ನಿವೇಶದ ಫೋಟೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ. ಅಂದಹಾಗೇ, ಈ ಘಟನೆ ನಡೆದದ್ದು ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ.
ಮೊರೆನಾದ ಅಂಬಾಹ್ ಎಂಬಲ್ಲಿರುವ ಬದ್‌ಫ್ರಾ ಹಳ್ಳಿಯಲ್ಲಿ, ಇಲ್ಲಿನ ನಿವಾಸಿ ಪೂಜಾರಾಮ್ ಜಾತವ್ ಅವರ 2 ವರ್ಷದ ಪುತ್ರ ರಾಜಾನ ಆರೋಗ್ಯ ಒಮ್ಮೆಲೇ ಹದಗೆಟ್ಟಿತು. ಹೊಟ್ಟೆ ಉಬ್ಬರಿಸಿತ್ತು. ನೋವಿನಿಂದ ಮಗು ದೊಡ್ಡದಾಗಿ ಅಳುತ್ತಲೇ ಇತ್ತು. ಆಗ ಮನೆಯಲ್ಲೇ ಅವನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗದೆ ಇದ್ದಾಗ ರಾಜಾನನ್ನು ಕರೆದುಕೊಂಡು ಮೊರೆನಾ ಜಿಲ್ಲಾಸ್ಪತ್ರೆಗೆ ಹೋದರು. ಅಪ್ಪ ಮತ್ತು ಅನಾರೋಗ್ಯ ಪೀಡಿತ ತಮ್ಮನೊಂದಿಗೆ ಜಾತವ್ ಹಿರಿಯ ಪುತ್ರ ಗುಲ್ಶಾನ್ ಕೂಡ ಹೋಗಿದ್ದ. ಪುಟ್ಟ ಮಗು ರಾಜಾಗೆ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿ ಆಗಲಿಲ್ಲ. ಅವನು ಉಸಿರು ನಿಲ್ಲಿಸಿದ. ಬಳಿಕ ಮಗುವಿನ ಶವವನ್ನು ವಾಪಸ್ ಹಳ್ಳಿಗೆ ತೆಗೆದುಕೊಂಡು ಹೋಗಲು ಒಂದು ಆಂಬುಲೆನ್ಸ್ ಕೊಡಿ ಎಂದು ಪೂಜಾರಾಮ್ ಆಸ್ಪತ್ರೆಯವರ ಬಳಿ ಎಷ್ಟು ಕೇಳಿದರೂ ಅವರು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಕೊನೆಗೂ ಪೂಜಾರಾಮ್ ಮನವಿಗೆ ಬೆಲೆ ಸಿಗಲೂ ಇಲ್ಲ.
ಇದನ್ನೂ ಓದಿ: ರಿಪೋರ್ಟರ್‌ಗಳಿಗೆ ಟೀ ಸರ್ವ್ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್
ಆಸ್ಪತ್ರೆಯವರು ಮಗುವಿನ ಶವವನ್ನೂ ಇಟ್ಟುಕೊಳ್ಳುತ್ತಿಲ್ಲ, ತೆಗೆದುಕೊಂಡು ಹೋಗಲು ಆಂಬುಲೆನ್ಸ್ ಕೂಡ ಕೊಡುತ್ತಿಲ್ಲ. ಇನ್ಯಾವುದಾದರೂ ವಾಹನ ಬಾಡಿಗೆಗೆ ಪಡೆಯೋಣ ಎಂದರೆ ಪೂಜಾರಾಮ್ ಬಳಿ ಹಣವೂ ಸಾಕಷ್ಟಿಲ್ಲ. ಶವ ತೆಗೆದುಕೊಂಡು ಹೋಗಬೇಕು ಎಂದರೆ ವಾಹನ ಚಾಲಕರು ಬರುತ್ತಲೂ ಇಲ್ಲ. ನೋಡುವಷ್ಟು ನೋಡಿದ ಪೂಜಾರಾಮ್, ತನ್ನ ಹಿರಿಯ ಪುತ್ರನನ್ನು ರಸ್ತೆ ಪಕ್ಕ ಕೂರಿಸಿ, ಆತನ ಮಡಿಲಲ್ಲಿ ಮಗುವನ್ನು ಮಲಗಿಸಿ ತಾನು ಆಸ್ಪತ್ರೆ ಹೊರಗೇ ಕಾಯುತ್ತ ನಿಂತಿದ್ದರು. ಎಲ್ಲಾದರೂ ಆಸ್ಪತ್ರೆಯವರು ಮನಸು ಬದಲಿಸಿ ಆಂಬುಲೆನ್ಸ್ ಕೊಡಬಹುದು ಎಂಬ ಆಸೆಯಿಂದ. ಇತ್ತ ಗುಲ್ಶಾನ್ ಸುಮಾರು ಅರ್ಧ ತಾಸು ಮೃತ ತಮ್ಮನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತೇ ಇದ್ದು, ಅಪ್ಪನಿಗಾಗಿ ಕಾಯುತ್ತಿದ್ದ. ಆದರೆ ಈ ದೃಶ್ಯವನ್ನು ನೋಡಿದ ಅನೇಕರು ಸ್ಥಳಕ್ಕೆ ಆಗಮಿಸಿದ್ದಾರೆ. ಗುಲ್ಶಾನ್ ಕುಳಿತಿದ್ದಲ್ಲಿ ದೊಡ್ಡ ಗುಂಪೇ ಸೇರಿತ್ತು. ಅದನ್ನು ನೋಡಿ ಅಲ್ಲಿಗೆ ಹೋದ ಪೊಲೀಸರು ಬಳಿಕ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೂಜಾರಾಮ್ ಜಾತವ್, ʼನನ್ನ ಪತ್ನಿ ಮನೆಯಲ್ಲಿಲ್ಲ. ರಾಜಾ ಏನು ತಿಂದ ಎಂಬುದೇ ನನಗೆ ಗೊತ್ತಾಗಲಿಲ್ಲ. ಏಕಾಏಕಿ ಅವನ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಹೋದಾಗ ಅವರೂ ಮಗುವನ್ನು ತಪಾಸಣೆ ಮಾಡಿ, ಔಷಧ ಬರೆದುಕೊಟ್ಟರು. ಆದರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲʼ ಎಂದು ಹೇಳಿದ್ದಾರೆ. ಇದು ದೊಡ್ಡ ಗಲಾಟೆಯಾಗುತ್ತಿದ್ದಂತೆ ಈ ಬಗ್ಗೆ ಮಾತನಾಡಿದ ಮೊರೆನಾ ಆಸ್ಪತ್ರೆ ಸಿವಿಲ್ ಸರ್ಜನ್ ವಿನೋದ್ ಗುಪ್ತಾ, ʼನಾವೂ ಕೂಡ ಬಳಿಕ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೆವು. ಆದರೆ ಅಷ್ಟರಲ್ಲಿ ಪೂಜಾರಾಮ್ ತನ್ನ ಮಕ್ಕಳೊಂದಿಗೆ ಹೊರಟುಬಿಟ್ಟಿದ್ದರುʼ ಎಂದಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿಡಿಯೋ ಪ್ರಸಾರ; ಸುದ್ದಿ ನಿರೂಪಕನ ಮನೆಯೆದುರು 2 ರಾಜ್ಯಗಳ ಪೊಲೀಸರಿಂದ ಹೈಡ್ರಾಮಾ