ನವದೆಹಲಿ: ಸಿಹಿತಿನಿಸುಗಳ ದೈತ್ಯ ಕಂಪನಿ “ಕ್ಯಾಡ್ಬರಿ” ಬಹಿಷ್ಕಾರಕ್ಕೆ ಟ್ವಿಟರ್‌ನಲ್ಲಿ ಭಾರಿ ಅಭಿಯಾನ ಆರಂಭವಾಗಿದೆ. ಕ್ಯಾಡ್ಬರಿಯನ್ನು ನಿಷೇಧಿಸಬೇಕು, ಅದನ್ನು ಬಹಿಷ್ಕರಿಸಬೇಕು ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ ಬಾಯ್ಕಾಟ್ ಕ್ಯಾಡ್ಬರಿ (Boycott Cadbury) ಎಂಬುದು ನಂಬರ್ 1 ಟ್ರೆಂಡ್ ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ದಾಮೋದರ್ ದಾಸ್ ಅವರಿಗೆ ಅವಮಾನ ಮಾಡಿರುವುದು ಹಾಗೂ ಕ್ಯಾಡ್ಬರಿ ಚಾಕೊಲೇಟ್‌ನಲ್ಲಿ ಗೋಮಾಂಸ ಇದೆ ಎಂಬ ಆರೋಪ ಕೇಳಿಬಂದಿರುವುದೇ ಕಾರಣವಾಗಿದೆ.
ಮೋದಿ ತಂದೆಗೆ ಅವಮಾನ?
ದೀಪಾವಳಿ ವೇಳೆ ಕ್ಯಾಡ್ಬರಿ ಚಾಕೊಲೇಟ್‌ಗಳ ಮಾರಾಟ ಹೆಚ್ಚಿಸುವ ದಿಸೆಯಲ್ಲಿ ಇತ್ತೀಚೆಗೆ ಕ್ಯಾಡ್ಬರಿ ಚಾಕೊಲೇಟ್ ಜಾಹೀರಾತು ನೀಡಲಾಗಿದೆ. ಜಾಹೀರಾತಿನಲ್ಲಿ ದಾಮೋದರ್ ಎಂಬ ಹೆಸರು ಬಳಕೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ದಾಮೋದರ ದಾಸ್ ಅವರಿಗೆ ಅವಮಾನ ಮಾಡಲೆಂದೇ ಕಂಪನಿಯು ವ್ಯಕ್ತಿಯೊಬ್ಬರಿಗೆ ಈ ಹೆಸರಿಟ್ಟಿದೆ ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕಿ ಡಾ.ಪ್ರಾಚಿ ಸಾಧ್ವಿ ಟ್ವೀಟ್ ಮಾಡಿದ್ದಾರೆ. ಹಾಗಾಗಿ, ಹೆಚ್ಚಿನ ಜನ ಕ್ಯಾಡ್ಬರಿ ಬಹಿಷ್ಕಾರಕ್ಕೆ ಅಭಿಯಾನ ಆರಂಭಿಸಿದ್ದಾರೆ.
ಗೋಮಾಂಸದ ಆರೋಪವೇನು?
ಕ್ಯಾಡ್ಬರಿ ಚಾಕೊಲೇಟ್‌ನಲ್ಲಿ ಹಲಾಲ್ ಪ್ರಮಾಣೀಕೃತ ಗೋಮಾಂಸ ಇದೆ ಎಂಬ ಚಿತ್ರವೂ ವೈರಲ್ ಆಗಿದೆ. ಇದರಿಂದಾಗಿಯೂ ಕ್ಯಾಡ್ಬರಿ ಬಹಿಷ್ಕಾರಕ್ಕೆ ಒತ್ತಾಯ ಕೇಳಿಬರುತ್ತಿದೆ. ಕ್ಯಾಡ್ಬರಿ ಚಾಕೊಲೇಟ್‌ನಲ್ಲಿ ಗೋಮಾಂಸ ಮಿಶ್ರಣ ಮಾಡುವ ಮೂಲಕ ಚಾಕೊಲೇಟ್ ಕಂಪನಿಯು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಆದರೆ, ವೈರಲ್ ಆದ ಚಿತ್ರವು ನಕಲಿ ಎಂದು ತಿಳಿದುಬಂದಿದೆ. 2021ರಲ್ಲಿಯೇ ಕ್ಯಾಡ್ಬರಿ ಬಹಿಷ್ಕಾರಕ್ಕೆ ಅಭಿಯಾನ ಆರಂಭಿಸಲಾಗಿತ್ತು.
ಇದನ್ನೂ ಓದಿ | ಹಲಾಲ್ ಬಾಯ್ಕಾಟ್ ಮಾಡಿ ಬೆಳಕಿನ ಹಬ್ಬ ಆಚರಿಸಿ: ಚಿಂತಕ ಚಕ್ರವರ್ತಿ ಸೂಲಿಬೆಲೆ